ಬೆಂಗಳೂರು: ನಗರದ ಪ್ರತಿಷ್ಠಿತ ಶಾಲೆಯ ಐದು ವರ್ಷದ ಮಗುವಿಗೆ ಶಾಲೆಯ ಶಿಕ್ಷಕಿಯೇ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ನಗರದ ಹಲಸೂರಿನ ಕೇಂಬಿಡ್ಜ್ ಬಡಾವಣೆಯಲ್ಲಿರುವ ಪ್ರತಿಷ್ಠಿತ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಐದು ವರ್ಷದ ಮಗುವಿನ ಮೇಲೆ ಶಿಕ್ಷಕಿ ದೈಹಿಕ ಹಾಗೂ ಮಾನಸಿಕವಾಗಿ ದೌರ್ಜನ್ಯ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮಗುವಿನ ತಾಯಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದು, ಇದರ ಅಧಾರದ ಮೇಲೆ ಆಯೋಗ ಶುಕ್ರವಾರ ಶಾಲೆಗೆ ನೋಟೀಸ್ ಕೂಡ ಜಾರಿ ಮಾಡಿದೆ. ಶೀಘ್ರ ನೋಟಿಸ್‌ಗೆ ಉತ್ತರ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ತಿಳಿಸಿದೆ.
ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೆಣ್ಣು ಮಗುವಿನ ಸ್ಕರ್ಟ್ ತೆಗೆಸಿದ್ದಲ್ಲದೆ, ಶಿಕ್ಷಕಿ ಎಲ್ಲರಿಗೂ “ಶೇಮ್ ಶೇಮ್ ಪಪ್ಪಿ ಶೇಮ್’ ಎಂದು ಹೇಳುವಂತೆ ಸೂಚಿಸಿದ್ದಾರೆ ಎಂದು ಮಗುವಿನ ತಾಯಿ ತನ್ನ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ಸಾರ್ವಜನಿಕವಾಗಿ ಭಾರೀ ಅಸಮಾಧಾನ, ಆಕ್ರೋಶಕ್ಕೀಡಾಗಿದೆ.
ಶಿಕ್ಷಕಿಯ ಈ ವರ್ತನೆಯಿಂದ ಮಗು ನಾನು ಶಾಲೆಗೆ ಹೋಗುವುದಿಲ್ಲವೆಂದು ಹಠ ಮಾಡಿದ್ದು, ಪೋಷಕರು ಸಮಾಧಾನದಿಂದ ಕೇಳಿದಾಗ ಸತ್ಯ ಬಿಚ್ಚಿಟ್ಟಿದೆ. ಶಿಕ್ಷಕಿಯ ವರ್ತನೆ ಖಂಡಿಸಿರುವ ಪೋಷಕರು ಈ ಪ್ರಕರಣ ವಿರುದ್ಧ ನ್ಯಾಯ ದೊರಕಿಸಿಕೊಡುವಂತೆ ಆನ್‌ಲೈನ್‌ನಲ್ಲಿ ಪಿಟಿಷನ್ ಹಾಕುತ್ತಿದ್ದಾರೆ.
5 ವರ್ಷದ ಮಗು ಮೇಲೆ ಶಿಕ್ಷಕಿಯಿಂದಲೇ ದೌರ್ಜನ್ಯ ನಡೆದಿರುವ ಬಗ್ಗೆ ದೂರು ಬಂದಿದೆ. ಕಾರಣ ತಿಳಿದು ಬಂದಿಲ್ಲ. ಹಾಗಾಗಿ ಸಂಬಂಧಿಸಿದ ಶಾಲೆಗೆ ನೋಟಿಸ್ ನೀಡಿದ್ದೇವೆ. ಆಯೋಗದಿಂದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಕೃಪಾ ಅಮರ್ ಆಳ್ವ, ಮಕ್ಕಳ ಹಕ್ಕು ರಕ್ಷಣಾ ಆಯೋಗ, ಅಧ್ಯಕ್ಷೆ