ಹಾಸನ: ಕೆಪಿಟಿಸಿಎಲ್ ಮಹಿಳಾ ಕಿರಿಯ ಎಂಜಿನಿಯರ್ ಮೇಲೆ ಅಟೆಂಡರ್ ಒಬ್ಬ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ. ಹಾಸನದ ಸಂತೇಪೇಟೆಯ ಕೆಪಿಟಿಸಿಎಲ್‌ನ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಳೆದ 6 ವರ್ಷಗಳಿಂದ ಸ್ವಾತಿ ದೀಕ್ಷಿತ್ ಅವರು ಜ್ಯೂನಿಯರ್ ಎಂಜಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಚೇರಿ ಮುಂಭಾಗದ ಸ್ಟೇಷನ್ ಯಾರ್ಡ್‌ನಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವು ಮಾಡಿ ಸ್ವಚ್ಛಗೊಳಸುವಂತೆ ಅಟೆಂಡರ್ ನವೀನ್, ಮಂಜುನಾಥ್ ಮತ್ತು ವೆಂಕಟೇಶ್‌ಗೌಡ ಅವರಿಗೆ ಸ್ವಾತಿ ದೀಕ್ಷಿತ್ ಶುಕ್ರವಾರ ಬೆಳಗ್ಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.
ನನ್ನ ಯಾರ್ಡ್ ಸ್ವಚ್ಛಗೊಳಿಸಿದ್ದೇನೆ ಮತ್ತೆ ನನಗೇಕೆ ಹೇಳುತ್ತೀರಿ ಎಂದು ಮಂಜುನಾಥ್ ಜಗಳ ತೆಗೆದಿದ್ದಾನೆ. ಯಾರಿಗೂ ಕೆಲಸ ಹಂಚಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಸ್ವಚ್ಛಗೊಳಿಸಿ ಎಂದು ಸ್ವಾತಿ ದೀಕ್ಷಿತ್ ಅವರು ತಾಕೀತು ಮಾಡಿದಾಗ, ನವೀನ್ ಮತ್ತು ವೆಂಕಟೇಶ್‌ಗೌಡ ಕೆಲಸಕ್ಕೆ ಮುಂದಾಗಿದ್ದಾರೆ. ಆದರೂ, ಮಂಜುನಾಥ್ ಸ್ವಚ್ಛತಾ ಕೆಲಸಕ್ಕೆ ಹೋಗಲಿಲ್ಲವೆನ್ನಲಾಗಿದೆ.
ನೌಕರರಿಗೆ ಸೂಚನೆ ನೀಡಿದ ನಂತರ ಸ್ವಾತಿ ದೀಕ್ಷಿತ್ ಅವರು ಕಚೇರಿಯಲ್ಲಿ ಕೆಲಸ ಮಾಡುವ ಸೌಮ್ಯಾ ಮತ್ತು ಸರಸ್ವತಿ ಅವರೊಂದಿಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲು ಹಿಡಿದಿದ್ದ ಮಚ್ಚು ಎತ್ತಿಕೊಂಡು ಕೂಗಾಡುತ್ತಾ ಬಂದ ಮಂಜುನಾಥ್ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಸ್ವಾತಿ ದೀಕ್ಷಿತ್ ಅವರ ತಲೆಗೆ ಮಚ್ಚು ಬೀಸಿದ್ದಾನೆ.
ಅವರು ತಪ್ಪಿಸಿಕೊಂಡರೂ ಬಿಡದೆ ಮಚ್ಚಿನಿಂದ ಹೊಡೆದಾಗ ಸ್ವಾತಿ ದೀಕ್ಷಿತ್ ಅವರ ಎಡಗೈ, ಎಡಕೆನ್ನೆ ಹಾಗೂ ಹಣೆಗೆ ಮಚ್ಚಿನೇಟು ಬಿದ್ದಿವೆ. ಸ್ವಾತಿ ದೀಕ್ಷಿತ್ ಅವರ ಎಡಗೆನ್ನೆ ಸುಮಾರು 3 ಇಂಚು ಭಾಗವಾಗಿದ್ದು, ಒಂದೆರೆಡು ಹಲ್ಲುಗಳು ಮುರಿದು ಹೋಗಿವೆ. ಎರಡು ಬೆರಳು ತುಂಡಾಗಿವೆ.
ಸ್ವಾತಿ ದೀಕ್ಷಿತ್ ಅವರ ರಕ್ಷಣೆಗೆ ಬಂದ ಬಂದ ವೆಂಕಟೇಶ್‌ಗೌಡ ಅವರ ತಲೆಗೂ ಮಚ್ಚಿನೇಟು ಬಿದ್ದಿದೆ. ಅವರಿಬ್ಬರೂ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮಂಜುನಾಥನನ್ನು ಹಾಸನ ನಗರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.