ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನಾಲ್ವರು ಕಾನೂನು ಸಂಘರ್ಷಕ್ಕೊಳಗಾದವರು ಸೇರಿ ಐವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಕಸ ಹಾಕಲು ಬಂದಿದ್ದ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ್ದ ನಾಲ್ವರು ಕಾನೂನು ಸಂಘರ್ಷಕ್ಕೊಳಗಾದವರನ್ನು ಆಡುಗೋಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆ ಸಮೀಪ ಕಸ ಹಾಕಲು ಬಂದಿದ್ದ ಮಹಿಳೆ ಜತೆ ನಾಲ್ವರು ಅಸಭ್ಯವಾಗಿ ವರ್ತಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಫೆ.18ರ ತಡರಾತ್ರಿ 12 ಗಂಟೆಗೆ 25 ವರ್ಷದ ಮಹಿಳೆ ಮನೆ ಸಮೀಪ ಕೋರಮಂಗಲ ಆಟೋ ನಿಲ್ದಾಣದ ಬಳಿ ಕಸ ಹಾಕಲು ಸ್ನೇಹಿತನ ಜತೆ ಬಂದಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಯುವಕರು, ತಮ್ಮ ಮನೆ ಸಮೀಪ, ಸಾರ್ವಜನಿಕ ಸ್ಥಳದಲ್ಲಿ ಏಕೆ ಕಸ ಹಾಕುತ್ತಿದ್ದಾರಾ ಎಂದು ಪ್ರಶ್ನಿಸಿ ಜಗಳ ಮಾಡಿದ್ದಾರೆ. ಅದು ವಿಕೋಪಕ್ಕೆ ಹೋದಾಗ, ತನ್ನ ಮೈಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜತೆಗೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಬಂಧನ: ಮತ್ತೂಂದು ಪ್ರಕರಣದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸವಿದ್ದ ಮಹಿಳೆ ಮುಂದೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಪುಲಿಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಸುರಪುರ ಮೂಲದ ಬಾಲಪ್ಪ(32) ಬಂಧಿತ. ಪುಲಕೇಶಿನಗರದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆ ಒಂಟಿಯಾಗಿ ವಾಸವಾಗಿದ್ದಾರೆ. ಇನ್ನು ಆರೋಪಿ ಕೆಂಗೇರಿಯಲ್ಲಿ ವಾಸವಿದ್ದು, ಗಾರೆಕೆಲಸ ಮಾಡುತ್ತಿದ್ದ. ಕಳೆದ ಕೆಲ ತಿಂಗಳಿಂದ ದೂರುದಾರ ಮಹಿಳೆಗೆ ಆರೋಪಿ ನಿರಂತರ ಕಿರುಕುಳ ನೀಡುತ್ತಿದ್ದ. ಸಂತ್ರಸ್ತೆ ಕಂಡ ಕೂಡಲೇ ಅಸಭ್ಯವಾಗಿ ವರ್ತಿಸುತ್ತಿದ್ದ.
ಫೆ.18ರಂದು ಕೂಡ ತುಂಬ ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಆರೋಪಿಯನ್ನು ಸ್ಥಳೀಯರ ನೆರವಿನಿಂದ ಸಂತ್ರಸ್ತೆಯೇ ಹಿಡಿದುಕೊಂಡು ಠಾಣೆಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.