ಗುವಾಹಟಿ : ಶಾಲೆಯ ಅಡುಗೆ ಕೋಣೆಯಲ್ಲಿ ದನದ ಮಾಂಸ ಬೇಯಿಸಿದರೆಂಬ ಆರೋಪದ ಮೇಲೆ ಅಸ್ಸಾಂ ಮೂಲದ ಶಾಲಾ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ದರಾಂಗ್ ಜಿಲ್ಲೆಯ ದಳಗಾಂವ್ ಪಟ್ಟಣದಲ್ಲಿನ ದಾಖೀನ್ ದೂಲಿಪಾರಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಸೀರುದ್ದೀನ್ ಅಹ್ಮದ್ ಬಂಧಿತ ಶಿಕ್ಷಕ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕಾಗಿ ಇವರು ದನದ ಮಾಂಸ ಬೇಯಿಸಿದರೆಂಬ ಆರೋಪಕ್ಕೆ ಗುರಿಯಾಗಿದ್ದಾರೆ.
ಕೆಲವು ಆರೋಪಿಸಿರುವ ಶಿಕ್ಷಕ ಅಹ್ಮದ್ ಅವರು ಕೆಲವು ಮಕ್ಕಳಿಗೆ ದನದ ಮಾಂಸದಡುಗೆಯನ್ನು ಬಡಿಸಿದ್ದಾರೆ. ಆದರೆ ಶಾಲಾಧಿಕಾರಿಗಳು ಈ ವಿಷಯವನ್ನು ಇನ್ನಷ್ಟೇ ದೃಢೀಕರಿಸಬೇಕಿದೆ.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಣಾಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಮಾಲಕ ವಿವಿಧ ಸಮುದಾಯಗಳಲ್ಲಿ ದ್ವೇಷವನ್ನು ಉತ್ತೇಜಿಸಲು ಶಿಕ್ಷಕ ಅಹ್ಮದ್ ಯತ್ನಿಸಿರುವುದಾಗಿ ಎಫ್ಐಆರ್‌ನಲ್ಲಿ ದೂರಲಾಗಿದೆ.
ದೇಶದ ಕೆಲವು ಭಾಗಗಳಲ್ಲಿ ಗೋಮಾಂಸ ನಿಷೇಧವಿದ್ದು ಈ ಬಗ್ಗೆ ಭಾರೀ ಹುಯಿಲೆಬ್ಬಿಸಲಾಗಿದೆ. ಇದನ್ನು ಉಲ್ಲೇಖೀಸಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಈ ವರ್ಷದ ಆದಿಯಲ್ಲಿ, “ದನದ ಮಾಂಸವನ್ನು ಯಾರೂ ತಿನ್ನಬಹುದು; ಆದರೆ ಅದರ ಸಂಭ್ರಮಾಚರಣೆಯ ಅಗತ್ಯ ಇಲ್ಲ’ ಎಂದು ಹೇಳಿದ್ದರು.