ಅಸ್ಸಾಂ: ಅಸ್ಸಾಂನ ಮಾರಿಯನಿ ವಿಧಾನಸಭಾ ಕ್ಷೇತ್ರದ ಶಾಸಕ ರುಪ್ ಜ್ಯೋತಿ ಕುರ್ಮಿ ಅವರು ಶುಕ್ರವಾರ(ಜೂನ್ 18) ಕಾಂಗ್ರೆಸ್ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶೀಘ್ರದಲ್ಲಿಯೇ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?
ಚಹಾ ತೋಟ ಕಾಯುವ ಸಮುದಾಯದ ಮುಖಂಡ ಕುರ್ಮಿ ಇಂದು ವಿಧಾನಸಭಾ ಸ್ಪೀಕರ್ ಬಿಸ್ವಜಿತ್ ಡೈಮರಿ ಅವರಿಗೆ ರಾಜೀನಾಮೆ ಪತ್ರವನ್ನು ನೀಡಿರುವುದಾಗಿ ವರದಿ ತಿಳಿಸಿದೆ. ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ರವಾನಿಸಿರುವುದಾಗಿ ಕುರ್ಮಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಕುರ್ಮಿ ಜೂನ್ 21ರಂದು ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕುರ್ಮಿಯನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ವರದಿ ವಿವರಿಸಿದೆ.
ಕುರ್ಮಿ ರಾಜೀನಾಮೆಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅನುಮೋದಿಸಿರುವುದಾಗಿ ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೋರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.