ಗುವಾಹಟಿ: ಮದುವೆಯಾಗೋದು ಅಂದರೆ ವಧು-ವರನಿಗೆ ಖುಷಿಯೋ ಖುಷಿ. ಅಸ್ಸಾಂನಲ್ಲಿರುವ ಮದುಮಕ್ಕಳಿಗಂತೂ ಇನ್ನು ಡಬಲ್ ಖುಷಿ. ಕಾರಣ, ಮದುವೆ ವೇಳೆ ಬರೋಬ್ಬರಿ 10 ಗ್ರಾಂ ಚಿನ್ನವನ್ನು ಸರಕಾರ ಕೊಡುಗೆಯಾಗಿ ನೀಡಲಿದೆ.
ವಧುವಿಗೆ ಚಿನ್ನ ನೀಡುವ ಯೋಜನೆ “ಅರುಂಧತಿ’ಗೆ ಅಲ್ಲಿನ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಇದು ಕರ್ನಾಟದ ಶಾದಿ ಭಾಗ್ಯದ ರೀತಿಯೇ ಇದೆ ಎನ್ನುವುದು ವಿಶೇಷ.
2020 ಜನವರಿಯಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಯೋಜನೆ ಅನ್ವಯ ವಿವಾಹ ನೋಂದಣಿ ಕಡ್ಡಾಯವಾಗಿದೆ. ಅಂದರೆ ಮಾತ್ರ ಚಿನ್ನದ ಕೊಡುಗೆ ಪಡೆಯಬಹುದು.
ಅರುಂಧತಿ ಯೋಜನೆಗೆ ಮಂಗಳವಾರ ಸಂಪುಟ ಸಮ್ಮತಿ ದೊರಕಿದ್ದು, ಇದಕ್ಕಾಗಿ ಸರಕಾರ ವಾರ್ಷಿಕ 800 ಕೋಟಿ ರೂ.ಗಳನ್ನು ವಿನಿಯೋಗಿಸಲಿದೆ.
ಯೋಜನೆಯನ್ವಯ ಚಿನ್ನ ಪಡೆಯಬೇಕಾದರೆ ವಧುವಿಗೆ 18, ವರನಿಗೆ 21 ವರ್ಷ ಆಗಿರಬೇಕು. ಆಕೆಯ ಕುಟುಂಬದ ವಾರ್ಷಿಕ ವರಮಾನ 5 ಲಕ್ಷ ರೂ.ಗಿಂತಲೂ ಕಡಿಮೆಯಿರಬೇಕು ಎಂಬ ಷರತ್ತಿದೆ. ಅಲ್ಲದೇ ಚಿನ್ನ ಕೊಡಲು ಸಾಧ್ಯವಾಗದಿದ್ದಲ್ಲಿ, ವಧುವಿಗೆ 30 ಸಾವಿರ ರೂ.ಗಳನ್ನು ಸರಕಾರ ಪಾವತಿಸಲಿದೆ. ವಿವಾಹ ನೋಂದಣಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.
ವಿವಾಹ ನಂತರ ಉದ್ಭವಿಸಬಹುದಾದ ಕಾನೂನು, ಕೌಟುಂಬಿಕ ಸಮಸ್ಯೆಗಳ ತಡೆಗೆ ಹೀಗೆ ಮಾಡಲಾಗುತ್ತಿದೆ ಎಂದು ಅಲ್ಲಿನ ಸಚಿವರು ಹೇಳಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಸಾಮಾಜಿಕ ಗುರಿಯನ್ನು ಇಟ್ಟುಕೊಂಡು ಜನಸಂಖ್ಯೆ ನೀತಿಯನ್ನು ರೂಪಿಸುವ ಉದ್ದೇಶವನ್ನು ಇದು ಹೊಂದಿದೆ ಎಂದೂ ಹೇಳಿದ್ದಾರೆ.