ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಹಲವು ರಾಜ್ಯಗಳಿಂದ ನಟಿಮಣಿಯರ ಆಗಮನವಾಗಿದೆ. ಈಗಲೂ ಆಗುತ್ತಲೇ ಇದೆ. ಆ ಸಾಲಿಗೆ ಈಗ ಅಸ್ಸಾಂ ಚೆಲುವೆ ಹೊಸ ಸೇರ್ಪಡೆ. ಹೌದು, ಖಯಾದು ರೋಹರ್ ಎಂಬ ಬೆಡಗಿ ಈಗಷ್ಟೇ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿರುವ ಖಯಾದು ರೋಹರ್‌ಗೆ ಸಾಕಷ್ಟು ಖುಷಿ ಮತ್ತು ಹೆಮ್ಮೆ ಇದೆ. ಅಂದಹಾಗೆ, ಅಸ್ಸಾಂ ಮೂಲದ ಈ ಹುಡುಗಿ ಬಂದಿರೋದು “ಮುಗಿಲ್ ಪೇಟೆ’ ಚಿತ್ರದ ನಾಯಕಿಯಾಗಿ.
ಹೌದು, ಆ ಚಿತ್ರದಲ್ಲಿ ಮನುರಂಜನ್ ಹೀರೋ. ಈಗಾಗಲೇ ಮುಹೂರ್ತ ಕಂಡಿರುವ ಈ ಚಿತ್ರ ಇನ್ನೇನು ಶುರುವಾಗಬೇಕಿದೆ. ತಮ್ಮ ಕನ್ನಡದ ಮೊದಲ ಚಿತ್ರದ ಬಗ್ಗೆ ಹೇಳಿಕೊಳ್ಳುವ ಖಯಾದು ರೋಹರ್, “ನನಗೆ ಇದು ಮೊದಲ ಕನ್ನಡ ಸಿನಿಮಾ. ಕನ್ನಡ ಭಾಷೆ ಮಾತನಾಡಲು ಬರಲ್ಲ. ಆದರೆ, ಶೇ.50 ರಷ್ಟು ಅರ್ಥವಾಗುತ್ತೆ. ಈ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಕನ್ನಡ ಭಾಷೆ ಕಲಿಯುತ್ತಿದ್ದೇನೆ. ಈಗಾಗಲೇ ನಿರ್ದೇಶಕರು ಕನ್ನಡ ಕ್ಲಾಸ್‌ಗೆ ಕಳುಹಿಸುತ್ತಿದ್ದಾರೆ.
ಸಿನಿಮಾ ಮುಗಿಯುವ ಹೊತ್ತಿಗೆ ಖಂಡಿತ ಕನ್ನಡದಲ್ಲೇ ಮಾತನಾಡುತ್ತೇನೆ’ ಎಂದು ವಿಶ್ವಾಸದಿಂದ ಹೇಳುತ್ತಾರೆ ಕಯಾದು ರೋಹರ್. ಅಂದಹಾಗೆ, ಈ ಚಿತ್ರದಲ್ಲಿ ಅವರಿಗೆ ಬಬ್ಲಿ ಪಾತ್ರ ಸಿಕ್ಕಿದೆಯಂತೆ. ತುಂಬಾ ಸ್ವತಂತ್ರವಾಗಿ ಓಡಾಡಿಕೊಂಡಿರುವ ಹುಡುಗಿಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರಂತೆ. ಇದಕ್ಕೂ ಮೊದಲು ಅವರು ಮರಾಠಿ ಸಿನಿಮಾವೊಂದರಲ್ಲಿ ನಟಿಸಿದ್ದು, ಆ ಚಿತ್ರ ಈಗ ಬಿಡುಗಡೆಗೆ ರೆಡಿಯಾಗುತ್ತಿದೆ. ಬೇರೆ ಭಾಷೆಯಲ್ಲಿ ನಟಿಸಬೇಕು ಎಂಬ ಆಸೆಯಲ್ಲಿದ್ದ ಅವರಿಗೆ ಕನ್ನಡದಿಂದ ಅವಕಾಶ ಸಿಕ್ಕಿದೆ.
ಖಯಾದು ರೋಹರ್, ಚಿತ್ರರಂಗಕ್ಕೆ ಸುಮ್ಮನೆ ಬಂದಿಲ್ಲ. ಅವರು ಹಿಂದಿ ರಂಗಭೂಮಿಯಲ್ಲಿ ಸ್ವಲ್ಪ ಮಟ್ಟಿಗೆ ತರಬೇತಿ ಪಡೆದಿದ್ದಾರೆ. ಫ್ಯಾಮಿಲಿ ಪೂನಾದಲ್ಲಿರುವುದರಿಂದ ಅವರಿಗೆ ಮರಾಠಿ ಭಾಷೆ ಸುಲಲಿತ. ಸದ್ಯಕ್ಕೆ ಬಿಕಾಂ ದ್ವಿತೀಯ ವರ್ಷ ಓದುತ್ತಿರುವ ಖಯಾದು ರೋಹರ್‌ಗೆ ಮರಾಠಿ ಸಿನಿಮಾ ಕೂಡ ಆಡಿಷನ್ ಮೂಲಕವೇ ಸಿಕ್ಕಿದ್ದಂತೆ. ಕನ್ನಡ ಕೂಡ ಹಾಗೆಯೇ ಒಲಿದು ಬಂದ ಅವಕಾಶವಾಗಿದ್ದು, ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಬೇಕು ಎಂದು ಎದುರು ನೋಡುತ್ತಿದ್ದವರಿಗೆ, “ಮುಗಿಲ್ ಪೇಟೆ’ ಕರೆದು ವೇದಿಕೆ ಕಲ್ಪಿಸಿದೆ.
ಹಾಗಾಗಿ ಈ ಹುಡುಗಿಗೆ ಇಲ್ಲೇ ಗಟ್ಟಿನೆಲೆ ಕಂಡುಕೊಂಡು ದೊಡ್ಡ ನಟಿ ಎನಿಸಿಕೊಳ್ಳುವ ಮಹದಾಸೆ ಇದೆ. ಕನ್ನಡದ ಮೊದಲ ಚಿತ್ರ ಇದಾಗಿರುವುದರಿಂದ, ಕನ್ನಡ ಇಂಡಸ್ಟ್ರಿ ಬಗ್ಗೆ ಸ್ವಲ್ಪ ತಿಳಿದುಕೊಂಡೇ ಇಲ್ಲಿಗೆ ಬಂದಿದ್ದಾರೆ. ಅವರಿಗೆ ಡಾ.ರಾಜಕುಮಾರ್ ಗೊತ್ತು. ಉಳಿದಂತೆ ರಾಜಕುಮಾರ್ ಹಾಗು ರವಿಚಂದ್ರನ್ ಅವರ ಸಿನಿಮಾ ನೋಡಲು ಒಂದಷ್ಟು ಸಿನಿಮಾಗಳ ಪಟ್ಟಿ ಮಾಡಿಕೊಂಡಿದ್ದಾರಂತೆ. ಇತ್ತೀಚೆಗೆ ಅವರು ಹಿಂದಿ ಭಾಷೆಯಲ್ಲಿ “ಕೆಜಿಎಫ್’ ಕೂಡ ನೋಡಿದ್ದಾರಂತೆ.
ಎಲ್ಲರಂತೆ ಅವರಿಗೂ ಡ್ರೀಮ್ ರೋಲ್ ಎಂಬುದಿದೆ. ಮಹಿಳಾ ಪ್ರಧಾನ ಕಥೆಯಲ್ಲಿ ಅವರು ನಟಿಸಬೇಕಂತೆ. ಅದರಲ್ಲೂ ಭಾರತೀಯ ಸಂಸ್ಕೃತಿ ಇರುವಂತಹ ಚಿತ್ರದಲ್ಲಿ ಕಾಣಿಸಿಕೊಳ್ಳುವ ಆಸೆ. ಅವರಿಗೆ ಲೀಡ್ ಪಾತ್ರ ಎನ್ನುವುದಕ್ಕಿಂತ ಮುಖ್ಯವಾಗಿ ತಾನು ಗುರುತಿಸಿಕೊಳ್ಳುವಂತಹ ಪಾತ್ರ ನಿರ್ವಹಿಸಬೇಕು ಎಂಬ ಬಯಕೆ ಅವರದು. ಇನ್ನು, ರೋಲ್ ಮಾಡೆಲ್ ಅಂತ ಯಾರನ್ನೂ ಅಂದುಕೊಳ್ಳದ ಅವರು, ಶ್ರೀದೇವಿ ಹಾಗು ಆಲಿಯಾ ಭಟ್ ಸ್ಫೂರ್ತಿಯಂತೆ.
ಅದೇನೆ ಇರಲಿ, ಸೌತ್ ಇಂಡಿಯಾದ ಮೊದಲ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖಯಾದು ರೋಹರ್ ಅವರಿಗೆ ಖುಷಿ ಇದೆ. ಅವರ ಫ್ಯಾಮಿಲಿ ಕೂಡ ಪ್ರೋತ್ಸಾಹಿಸುವುದರಿಂದ ಕಲರ್‌ಫುಲ್ ಲೋಕವನ್ನು ಅಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಫೆಬ್ರವರಿಯಲ್ಲಿ ಅವರ ಬಿಕಾಂ ಎಕ್ಸಾಮ್ ಇದೆ. ಸಿನಿಮಾ ಮತ್ತು ಓದು ಎರಡನ್ನೂ ಬ್ಯಾಲೆನ್ಸ್ ಮಾಡ್ತೀನಿ ಎನ್ನುವ ಅವರ ಮನೆಯಲ್ಲಿ ಮೊದಲು ಒಂದು ಪದವಿ ಮುಗಿಸಿ, ಆಮೇಲೆ ನಿನ್ನಿಷ್ಟದಂತೆ ಸಿನಿಮಾದಲ್ಲಿ ತೊಡಗಿಕೊಳ್ಳಬೇಕೆಂಬ ಆಜ್ಞೆಯಾಗಿದೆಯಂತೆ.