Advertisement
ಜನವರಿಯಲ್ಲಿ ನಡೆದ ಒಂದು ಸಮೀಕ್ಷೆ ಪ್ರಕಾರ (ಎಬಿಪಿ-ಸಿ ವೋಟರ್) ಬಿಜೆಪಿಗೆ ಗೆಲುವು ಖಚಿತ ಎಂದು ಹೇಳಿತ್ತು. ಬಿಜೆಪಿ- 73 ರಿಂದ 81, ಕಾಂಗ್ರೆಸ್ 41 ರಿಂದ 49. ಫೆಬ್ರವರಿಯಲ್ಲಿ ನಡೆದ ಮತ್ತೂಂದು ಸಮೀಕ್ಷೆ ಪ್ರಕಾರ ಬಿಜೆಪಿ ಗೆಲ್ಲುವುದು ಖಚಿತ, ಆದರೆ ಸ್ವಲ್ಪ ಕಷ್ಟ ಪಡಬೇಕು ಎಂದಿತು. ಆಗ ಕೊಟ್ಟ ಸ್ಥಾನಗಳ ಲೆಕ್ಕಾಚಾರ ಬಿಜೆಪಿ-68-76, ಕಾಂಗ್ರೆಸ್ 47- 55 ಎಂದಿತು. ಎರಡು ದಿನಗಳ ಹಿಂದಷ್ಟೇ ಪ್ರಕಟಗೊಂಡ ಸಮೀಕ್ಷೆ (ಟೈಮ್ಸ್ ನೌ-ಸಿ ವೋಟರ್) ಪ್ರಕಾರ ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರಕ್ಕಾಗಿ ಗುದ್ದಾಡಲಿದೆ. ಬಿಜೆಪಿಗೆ ಸುಲಭ ತುತ್ತಲ್ಲ ಅಸ್ಸಾಂ ಎಂದಿತು. ಅದರ ಪ್ರಕಾರ ಬಿಜೆಪಿಗೆ 67, ಕಾಂಗ್ರೆಸ್ ಗೆ 57 ಸ್ಥಾನಗಳು ಬರಬಹುದು. ಇದರರ್ಥ ಬಿಜೆಪಿ ತನ್ನ ಅಂಗಪಕ್ಷಗಳಾದ ಎಜಿಪಿ ಹಾಗೂ ಯುಪಿಪಿಎಲ್ ನ್ನೂ ಒಳಗೊಂಡಿದೆ. ಕಾಂಗ್ರೆಸ್ ತನ್ನ ಅಂಗಪಕ್ಷಗ ಳಾದ ಎಐಯುಡಿಎಫ್, ಎಡಪಕ್ಷಗಳು, ಬಿಪಿಎಫ್, ಎಜಿಎಂ ನ್ನೂ ಒಳಗೊಂಡಿದೆ. ಅಸ್ಸಾಂ ನಲ್ಲಿ ಇರುವಂಥದ್ದು 126 ವಿಧಾನ ಸಭಾ ಕ್ಷೇತ್ರಗಳು. ಅಧಿಕಾರದ ಚುಕ್ಕಾಣಿ ಹಿಡಿಯಲು 64 ಸ್ಥಾನಗಳು ಬೇಕೇಬೇಕು.
2001 ರಿಂದ 2011ರ ವರೆಗೆ ಅಸ್ಸಾಂನಲ್ಲಿ ಕಾಂಗ್ರೆಸ್ಸೇ ದಾದಾ. ಯಾರೂ ತುಟಿಕ್ ಪಿಟಿಕ್ ಎನ್ನುವಂತಿರಲಿಲ್ಲ. ಕೆಲವೇ ತಿಂಗಳುಗಳ ಹಿಂದೆ ನಿಧನ ಹೊಂದಿದ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ರಾಜ್ಯವನ್ನು ಹೊಸ ದಿಸೆಯತ್ತ ಕೊಂಡೊಯ್ದ ಕೀರ್ತಿಗೆ ಭಾಜನರಾಗಿರುವವರು. ಅಸ್ಸಾಂ ಮೊದಲಿ ನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಆದರೆ ಹಿಂದಿನ ಸಂದರ್ಭಕ್ಕೂ ಕಾಂಗ್ರೆಸ್‌ನ ತರುಣ್ ಗೊಗೊಯ್ ಮುಖ್ಯಮಂತ್ರಿಯಾಗುವ 2001 ರ ಸಂದರ್ಭಕ್ಕೂ ವ್ಯತ್ಯಾಸವಿತ್ತು. ಉಗ್ರರ ಉಪಟಳವಿತ್ತು, ಸರಕಾರದ ಖಜಾನೆ ಖಾಲಿ ಹೊಡೆಯುತ್ತಿತ್ತು. ಸರಕಾರಿ ನೌಕರರು ಸಂಬಳಕ್ಕೆ ಪರದಾಡಬೇಕಿತ್ತು. ಆ ಹೊತ್ತಿನಲ್ಲಿ ತರುಣ್ ಗೊಗೊಯ್ ಉಗ್ರ ಸಂಘಟನೆಗಳನ್ನು ಮಾತುಕತೆಗೆ ಕರೆಸಿ ದಾರಿ ಸರಿ ಮಾಡಿದರು. ಆರ್ಥಿಕ ಪುನಶ್ಚೇತನಕ್ಕೂ ಮುಂದಡಿಯಿಟ್ಟರು. ಎಲ್ಲದರ ಫಲವಾಗಿ 2011ರ ಅವಧಿವರೆಗೂ ಮೂರು ಬಾರಿ ಸತತವಾಗಿ ಮುಖ್ಯಮಂತ್ರಿಯಾದರು. 2016ರಲ್ಲಿ ಲೆಕ್ಕಾಚಾರ ಬದಲಾಯಿತು. ಭಾರತೀಯ ಜನತಾ ಪಾರ್ಟಿ ರಂಗಕ್ಕೆ ಇಳಿದು ಕಾರ್ಯ ನೀತಿ ರೂಪಿಸಿತು. ಕಾಂಗ್ರೆಸ್‌ನ ದೊಡ್ಡ ದೊಡ್ಡ ಕಂಬಗಳೆಲ್ಲ ಬಿಜೆಪಿ ಅಂಗಳಕ್ಕೆ ಸ್ಥಳಾಂತರಗೊಂಡವು. ಪರಿಣಾಮ ಕಾಂಗ್ರೆಸ್ ಮನೆ ಕುಸಿಯಿತು. ಮೊದಲ ಬಾರಿಗೆ ಬಿಜೆಪಿ ಅಧಿಕಾರ ಸ್ಥಾಪಿಸಿತು. 2016 ರಲ್ಲಿ ಗೆದ್ದ ಸ್ಥಾನಗಳು 60. ಅವರ ಅಂಗಪಕ್ಷಗಳು 16 ಸ್ಥಾನ ಗಳಿಸಿದವು. ಆಗ ಕಾಂಗ್ರೆಸ್‌ಗೆ ಸಿಕ್ಕಿದ್ದು 26. ಅದರ ಅಂಗಪಕ್ಷಕ್ಕೆ ಸಿಕ್ಕಿದ್ದು 14.
Related Articles
Advertisement
ಹೀಗೆಲ್ಲ ಇದ್ದರೂ ಸದ್ಯಕ್ಕೆ ಉಭಯ ಪಕ್ಷಗಳಿಗೂ ಗಾಳಿ ಬಿಸಿಯೇ.
– ಅಶ್ವಘೋಷ