ಹೊಸದಿಲ್ಲಿ: ಭಾರತ, ಚೀನ ಹಾಗೂ ನೇಪಾಲಕ್ಕೆ ಸೇರಿದ ಹಿಮಚ್ಛಾದಿತ ಪ್ರದೇಶಗಳಲ್ಲಿರುವ ಮಂಜುಗಡ್ಡೆಯ ಸರೋವರಗಳಲ್ಲಿ ನೀರಿನ ಮಟ್ಟ 2009 ರಿಂದೀಚೆಗೆ ಶೇ. 40ರಷ್ಟು ಹೆಚ್ಚಾಗಿದ್ದು ಇದರಿಂದ ಭಾರತದ ಐದು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಖಂಡಿತವಾಗಿ ಜಲ ಗಂಡಾಂತರ ಬಂದೊದಗಲಿದೆ ಎಂಬ ಆತಂಕಕಾರಿ ವಿಚಾರವೊಂದನ್ನು ಭಾರ ತದ “ವಿಜ್ಞಾನ ಮತ್ತು ಪರಿಸರ ಕೇಂದ್ರ’ (ಸಿಎಸ್‌ಇ) ಹೊರಹಾಕಿದೆ.
ಈ ಸರೋವರಗಳನ್ನು ಹಾಗೂ ದೇಶದ ಇನ್ನಿತರ ಜಲಮೂಲಗಳಿಂದ ಪರಿಸರದ ಮೇಲಾಗುತ್ತಿರುವ ಪ್ರಭಾವ ಗಳನ್ನು ಅಧ್ಯಯನ ಮಾಡಿರುವ ಸಿಎಸ್‌ಇ ತಜ್ಞರು, “ಸ್ಟೇಟ್ ಆಫ್ ಇಂಡಿ ಯಾಸ್ ಎನ್ವಿರಾನ್‌ಮೆಂಟ್ 2022: ಇನ್ ಫಿಗರ್ಸ್’ ಎಂಬ ವರದಿಯನ್ನು ಸಿದ್ಧಪಡಿಸಿದ್ದಾರೆ.
ಈ ವರದಿಯಲ್ಲಿ, “ಭಾರತ, ಚೀನ, ನೇಪಾಲಕ್ಕೆ ಸೇರಿದ ಹಿಮ ಸರೋವರಗಳಲ್ಲಿ ನೀರು ಹೆಚ್ಚಾದರೆ ಅದು ಅಸ್ಸಾಂ, ಅರುಣಾಚಲ ಪ್ರದೇಶ, ಸಿಕ್ಕಿಂ, ಬಿಹಾರ, ಹಿಮಾಚಲ ಪ್ರದೇಶ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಆಪೋಶನ ತೆಗೆದು ಕೊಳ್ಳಲಿವೆ’ ಎಂದು ತಿಳಿಸಲಾಗಿದೆ.
ಹೆಚ್ಚಾಗುತ್ತಿರುವ ಮಣ್ಣಿನ ಸವಕಳಿ
ಈ ವರದಿಯಲ್ಲಿ ಮತ್ತೊಂದು ಆತಂಕಕಾರಿ ವಿಚಾರವೊಂದಿದೆ. ದೇಶದ ಕರಾವಳಿ ಭಾಗದಲ್ಲಿ ಸಮುದ್ರದ ಅಲೆಗಳಿಂದ ಆಗುವ ಮಣ್ಣಿನ ಸವಕಳಿ, 1990ರಿಂದ 2018 ರ ವರೆಗೆ ಗಣನೀಯ ಮಟ್ಟದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ. ಅದರಲ್ಲೂ ಪಶ್ಚಿಮ ಬಂಗಾಲದ ಕರಾವಳಿಯಲ್ಲಿ ಸಮುದ್ರದ ಅಲೆಗಳಿಂದಾಗಿರುವ ಶೇ. 60ಕ್ಕಿಂತ ಹೆಚ್ಚು ಮಣ್ಣಿನ ಸವಕಳಿ ಉಂಟಾಗಿದೆ ಎಂದು ಹೇಳಿದೆ.
ಇತ್ತೀಚೆಗೆ, ಪದೇ ಪದೆ ಚಂಡ ಮಾರುತಗಳು ಸಂಭವಿಸುತ್ತಿರುವುದು, ಸಮುದ್ರಮಟ್ಟ ಏರಿಕೆಯಾಗುತ್ತಿರುವುದು, ಬಂದರುಗಳ ನಿರ್ಮಾಣ, ಸಮುದ್ರದ ದಂಡೆಗಳಲ್ಲಿ ಗಣಿಗಾರಿಕೆ ಹಾಗೂ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಈ ಸವಕಳಿ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.