ಕಾರ್ಕಳ: ಸಾಮಾನ್ಯವಾಗಿ ಕೆಲಸದಿಂದ ಒಂದಿನ ವಿಶ್ರಾಂತಿ ಸಿಕ್ಕರೆ ಸಾಕು ಅಂತ ಅಂದುಕೊಳ್ಳುವವರೇ ಹೆಚ್ಚು. ಅಂತಹದರಲ್ಲಿ ಇಲ್ಲೊಬ್ಬರು ಶಿಕ್ಷಕಿ ಭತ್ತದ ವಿವಿಧ ತಳಿಗಳನ್ನು ಸಂರಕ್ಷಿಸುತ್ತಿದ್ದಾರೆ. ಅಕ್ಷರಭ್ಯಾಸದ ಜತೆಗೆ ಅನ್ನದ ಪಾಠಕ್ಕೂ ಮಹತ್ವ ನೀಡಿ ಮಾದರಿ ಎಂದೆನಿಸಿಕೊಂಡಿದ್ದಾರೆ.
ಕಾರ್ಕಳ ಸರಕಾರಿ ಹಿ.ಪ್ರಾ. ಶಾಲೆಯ ಶಿಕ್ಷಕಿ ಸಾಣೂರಿನ ಅಸ್ಮಾ ಅಬೂಬಕರ್ ಅವರಿಗೆ ಕೃಷಿ ಮೇಲೆ ಅತೀವ ಪ್ರೀತಿ. ಅದಕ್ಕೆಂದೇ ಭತ್ತದ ತಳಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಗಳದ ಬದಿಯ ಕುಂಡಗಳಲ್ಲಿ 500 ವಿವಿಧ ಜಾತಿಯ ಭತ್ತದ ಬೀಜಗಳನ್ನು ಪ್ರತ್ಯೇಕ ಹೂವಿನ ಕುಂಡಗಳಲ್ಲಿ ನೆಟ್ಟು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಳಿವಿನಂಚಿನ ಭತ್ತದ ತಳಿಗಳ ಪುನಃ ಶ್ಚೇತನ ಅವರ ಈ ಯೋಜನೆಗೆ ಕಾರಣ.
ಪತಿಗೆ ಪತ್ನಿಯ ಸಾಥ್! ಆಸ್ಮಾ ಅವರ ಪತಿ ಅಬೂಬಕರ್ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡವರು. ಅವರು ಕಾರ್ಕಳದ ಹೊಟೇಲ್ ಸಾಗರ್‌ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಡಿಲು ಬಿದ್ದ ಗದ್ದೆಯನ್ನು ಸಾಗುವಳಿ ಮಾಡಿ ಮಾದರಿ ಎನಿಸಿಕೊಂಡಿದ್ದಾರೆ. ಭತ್ತದ ಗದ್ದೆಯೊಂದರಲ್ಲಿ 105 ತಳಿಯ ಭತ್ತದ ಕೃಷಿಯನ್ನು ನಡೆಸಿದ್ದರು. ಅದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿತ್ತು. ಕಳೆದ ವರ್ಷ ಬಾರಾಡಿಯಲ್ಲಿ ನಡೆಸಿದ ಭತ್ತದ ಕೃಷಿ ಕೈಕೊಟ್ಟ ಹಿನ್ನೆಲೆಯಲ್ಲಿ ಪತಿ ನಿರಾಶರಾಗಿರುವುದನ್ನು ಪತ್ನಿ ಗಮನಿಸಿದ್ದರು. ಇದೇ ಹೊತ್ತಿನಲ್ಲಿ ಆಸ್ಮಾ ತಳಿ ಸಂರಕ್ಷಿಸಿಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಯಾವೆಲ್ಲ ಜಾತಿಯ ತಳಿಗಳಿವೆ
ಒಂದೇ ಗದ್ದೆಯಲ್ಲಿ ಎಪಿ30, ಎಪಿ31, ಎಪಿ32, ಎಪಿ33, ಎಪಿ34, ಎಪಿ35, ಎಪಿ36, ಎಪಿ37, ಎಪಿ38, ಎಪಿ39, ಎಪಿ40, ಎಪಿ41, ಎಪಿ 42, ಎಪಿ43, ಎಪಿ44. ಎಪಿ45, ಎಪಿ46, ಎಪಿ47, ನಾಗಸಂಪಿಗೆ, ಸರಸ್ವತಿ, ಕಜಾಜಯ, ಬಿಳಿಜಯ, ಸಹ್ಯಾದ್ರಿ, ಚಂಪಕ, ರಾಜಮುಡಿ (ಬಿಳಿ), ರಾಜಮುಡಿ (ಕೆಂಪು), ಕಡಲ ಚಂಪ, ಕುಂಬಲೂರ ಸಲೈ, ಸಿಂಧೂರು ಮಧು ಸಲೈ, ರತ್ನಚೂರಿ, ಕಿಚ್‌ಡಿಸಾಂಬ, ದೆಹಲಿ ಬಾಸ್ಮತಿ, ಜೀರಿಗೆ ಸಣ್ಣ, ರಾಮ್‌ಗಲ್ಲಿ, ಮಲ್ಲಿಗೆ, ದಪ್ಪಪಲ್ಯ, ಅಂದನೂರು ಸಣ್ಣ, ಮಾಲ್‌ಗುಡಿ ಸಣ್ಣ, ಕಾಳಝೀರ, ಮಾಪಿಳ್ಳೆಸಾಂಬ, ಗಿರಿಸಲೈ, ಎಚ್‌ಎಂಟಿ, ಕಾಶ್ಮೀರಿ ಭಾಸ್ಮತಿ, ಗಂಧಸಲೈ, ಡೆಹರಾಡೂನ್ ಭಾಸ್ಮತಿ, ರಾಜ್‌ಬೋಗ, ಸಿದ್ದಸಣ್ಣ, ಬರ್ಮಬ್ಲೆಕ್, ಬಂಗಾರಸಣ್ಣ, ಕರಿಕಗ್ಗ, ಪುಟ್ಟುಭತ್ತ, ಡಾಂಬರ್‌ಸಲೈ, ಆಂಧ್ರ ಬಾಸ್ಮತಿ, ಚೆನ್ನಿಪೊನ್ನಿ, ಕರಿಬಾಸ್ಮತಿ, ಆನಂದಿನವರ ಎಪಿ1, ಎಪಿ2, ಎಪಿ3, ಎಪಿ4, ಎಪಿ5, ಎಪಿ6,ಎಪಿ7, ಎಪಿ8, ಎಪಿ9, ಎಪಿ10, ಎಪಿ11, ಎಪಿ12, ಎಪಿ13, ಎಪಿ14, ಎಪಿ15, ಎಪಿ16, ಎಪಿ17, ಎಪಿ18, ಎಪಿ19, ಎಪಿ20, ಎಪಿ21, ಎಪಿ22, ಎಪಿ23, ಎಪಿ24, ಎಪಿ25, ಎಪಿ26, ಎಪಿ27, ಎಪಿ28, ಎಪಿ29, ಗುಜಗುಂಡ, ಕಗಿಸಲೈ, ಗೋಪಿಕಾ, ಮಧುಸಲೈ, ಮೈಸೂರು ಮಲ್ಲಿಗೆ, ಸಣ್ಣರಾಜಗ್ಯಾಮೆ, ಚಕಾವುಕೊರಿಯೆಟ್, ರಾಜ್‌ಕಮಲ್, ಭಾಸ್ಮತಿ, ಸೇಲಂಸಣ್ಣ, ಅಬ್ಕಲ, ಮುಕ್ಕಣ್ಣಿಸಣ್ಣ, ಗೌರಿಸಣ್ಣ, ಶಂಕ್ರುಕೆಂಪಕ್ಕಿ, ಕರಿನೆಲ್ಲು, ಬೈಗಾಣಮಜ್ಜಿಗೆ, ಮಂಜುಗುಣಿ, ಬೆಳಿನೆಲ್ಲು, ದೀಪಕ್‌ರಾಣೆ, ಕಾಲಬತ್ತ, ಮೈಸೂರ್‌ಸಣ್ಣ, ವಂದನ, ಗಿರಿಸಲೈ, ದೊಡ್ಡಬತ್ತ, ನೆಲ್ಲೂರು ಪುಟ್ಟಲ್, ರತ್ನಸಾಗರ್, ಕರಿಗೆ ಜವುಳಿ, ಬಾರಾರತ್ನಚೂರಿ, ಪ್ರಯಾಕ, ಬಿಳಿ ಮುದಿಗ ಮುಂತಾದ 500 ತಳಿಗಳನ್ನು ಕುಂಡಗಳಲ್ಲಿ ಬೆಳೆಯಲಾಗಿದೆ.
1 ಸಾವಿರ ತಳಿ ಗುರಿ
ಪತಿಯ ಆಶಯದಂತೆ ವಿವಿಧ ಭತ್ತದ ತಳಿಗಳ ಬೀಜಗಳ ಸಂರಕ್ಷಣೆ ಮುಂದಾಗಿರುವ ಆಸ್ನಾ ಅಬೂಬಕರ್ ದಂಪತಿ ರಾಜ್ಯ-ಅಂತಾರಾಜ್ಯಗಳಿಂದಲೂ ಭತ್ತದ ತಳಿಗಳನ್ನು ಪರಿಚಯಿಸಿಕೊಂಡು ತಂದು ಬೆಳೆಯುವ ಯೋಜನೆ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಸದ್ಯ 500 ತಳಿಗಳಿದ್ದು, ಮುಂದಕ್ಕೆ 1,000ಕ್ಕೂ ಮಿಕ್ಕಿದ ತಳಿಗಳ ಸಂರಕ್ಷಣೆ ಮಾಡುವ ಉದ್ದೇಶ ಅವರು ಹೊಂದಿದ್ದಾರೆ.
ತಳಿಗಳ ಉಳಿವು ಅಗತ್ಯ: ಅಳಿವಿನಂಚಿನಲ್ಲಿರುವ ಭತ್ತದ ತಳಿಗಳು ಉಳಿಯಬೇಕು. ಮುಂದಿನ ಪೀಳಿಗೆಗೆ ಅವುಗಳನ್ನು ಪರಿಚಯಿಸುವ ಪ್ರಯತ್ನ ನಡೆಯಬೇಕಿದೆ. –
ಆಸ್ಮಾ ಅಬೂಬಕರ್ ಸಾಣೂರು
ಬಾಲಕೃಷ್ಣ ಭೀಮಗುಳಿ