ನವದೆಹಲಿ:ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ವಾಸವಾಗಿರುವ ದೆಹಲಿಯ ಲೋಧಿ ಎಸ್ಟೇಟ್ ನ ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ. ಮೂಲಗಳ ಪ್ರಕಾರ, ಪ್ರಿಯಾಂಕಾ ಉತ್ತರಪ್ರದೇಶಕ್ಕೆ ಸ್ಥಳಾಂತರಗೊಳ್ಳಲಿದ್ದು, ಲಕ್ನೋ ಬಂಗ್ಲೆಯಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ.
ಉತ್ತರಪ್ರದೇಶ ಚುನಾವಣೆ ಮೇಲೆ ಪ್ರಿಯಾಂಕಾ ಕಣ್ಣು:
ವರದಿಯ ಪ್ರಕಾರ, ಪ್ರಿಯಾಂಕ ಇದೀಗ ಲಕ್ನೋದಲ್ಲಿ ಕಾಂಗ್ರೆಸ್ ಪಕ್ಷದ ನೆಲೆ ಭದ್ರಗೊಳಿಸುವ ಚಿಂತನೆಯಲ್ಲಿದ್ದು, 2022ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮೇಲೆ ದೃಷ್ಟಿ ನೆಟ್ಟಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಲಕ್ನೋದ “ಕೌಲ್ ಹೌಸ್” ಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ಈ ಬಂಗಲೆ ಇಂದಿರಾಗಾಂಧಿ ಸಂಬಂಧಿ ಶೀಲಾ ಕೌಲ್ ಅವರಿಗೆ ಸೇರಿದ್ದಾಗಿದೆ. ಕೌಲ್ ಕೂಡಾ ಕೇಂದ್ರ ಸಚಿವೆಯಾಗಿದ್ದು, ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕಿಯಾಗಿದ್ದರು. ಏತನ್ಮಧ್ಯೆ ಕೌಲ್ ಹೌಸ್ ನ ಪುನರ್ ನವೀಕರಣ ಕೆಲಸ ಮುಕ್ತಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ದೆಹಲಿಯಿಂದ ಲಕ್ನೋಗೆ ಸ್ಥಳಾಂತರಗೊಳ್ಳುವ ಪ್ರಿಯಾಂಕಾ ನಿರ್ಧಾರ ಚುನಾವಣೆ ಸಿದ್ಧತೆಯ ತಯಾರಿ ಎಂದೇ ಹೇಳಲಾಗುತ್ತಿದೆ. ಚುನಾವಣೆಗೂ ಮುನ್ನ ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚು, ಹೆಚ್ಚು ಕಾಲ ಕಳೆಯುವ ಇಚ್ಛೆ ಹೊಂದಿದ್ದಾರೆನ್ನಲಾಗಿದೆ. ಇಂದಿರಾ ಗಾಂಧಿಯನ್ನು ಪುನರ್ ನೆನಪಿಸಿಕೊಂಡಂತೆ, ಇಂದಿರಾಗಾಂಧಿ ಕೂಡಾ ಫಿರೋಜ್ ಗಾಂಧಿ ಜತೆ ವಿವಾಹವಾದ ನಂತರ ಲಕ್ನೋಗೆ ಆಗಮಿಸಿದ್ದು, ಚಾರ್ ಬಾಗ್ ರೈಲ್ವೆ ನಿಲ್ದಾಣ ಸಮೀಪದ ಎಪಿ ಸೇನ್ ರಸ್ತೆ ಬಳಿಯ ಬಂಗ್ಲೆಯಲ್ಲಿ ವಾಸವಾಗಿದ್ದರು ಎಂದು ವರದಿ ವಿವರಿಸಿದೆ.
ಪ್ರಿಯಾಂಕಾ ಎಸ್ ಪಿಜಿ ಭದ್ರತೆ ವಾಪಸ್:
ಪ್ರಿಯಾಂಕಾ ಗಾಂಧಿ ಆಗಸ್ಟ್ 1ರೊಳಗೆ ಬಂಗಲೆ ತೆರವುಗೊಳಿಸಬೇಖಕು ಎಂದು ಸೂಚಿಸಲಾಗಿದೆ. ಇದರ ಹೊರತಾಗಿಯೂ ಅವರು ಬಂಗಲೆಯಲ್ಲಿ ವಾಸ್ತವ್ಯ ಮುಂದುವರಿಸಿದರೆ ದಂಡ ಪಾವತಿ ಮಾಡಬೇಕು ಎಂದು ತಾಕೀತು ಮಾಡಿದೆ. ಪ್ರಿಯಾಂಕಾಗೆ ಇದ್ದ ಎಸ್ ಪಿಜಿ ಭದ್ರತೆ ಹಿಂಪಡೆದು ಝಡ್ ಪ್ಲಸ್ ಭದ್ರತೆ ನೀಡಲಾಗಿತ್ತು. ಹೀಗಾಗಿ ಬಂಗಲೆ ತೆರವಿಗೆ ಸೂಚಿಸಲಾಗಿದೆ.
ಲೋಧ್ ಎಸ್ಟೇಟ್ ಬಂಗಲೆ 1997ರ ಫೆಬ್ರುವರಿ 21ರಂದು ಪ್ರಿಯಾಂಕಾ ಗಾಂಧಿಗೆ ನೀಡಲಾಗಿತ್ತು. ಇದು ಎಸ್ ಪಿಜಿ ಭದ್ರತೆಯಡಿ ಈ ಬಂಗಲೆ ಕೊಡಲಾಗಿತ್ತು. ದಾಖಲೆಯ ಪ್ರಕಾರ, ಪ್ರಿಯಾಂಕಾ ಗಾಂಧಿ ಜೂನ್ 30ರವರೆಗೆ 3,46,677 ರೂಪಾಯಿ ಪಾವತಿಸಬೇಕಾಗಿದೆ. ಬಾಕಿ ಮೊತ್ತ ಹಾಗೂ ಖಾಲಿ ಮಾಡುವ ದಿನದವರೆಗಿನ ಬಾಡಿಗೆ ಹಣವನ್ನು ಪಾವತಿಸಿ ಬಂಗಲೆ ಖಾಲಿ ಮಾಡಬೇಕಾಗಿದೆ ಎಂದು ನಗರಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ.