Advertisement
ಎಷ್ಟೋ ಮಂದಿ ತಮ್ಮನ್ನು ತಾವು ಪ್ರೀತಿಸದೇ, ಪರರೊಂದಿಗೆ ತಮ್ಮನ್ನು ಹೋಲಿಸಿಕೊಂಡು ಅವರ ಗುಣಗಾನದಲ್ಲೇ ಬದುಕನ್ನು ಕಳೆಯುತ್ತಾರೆ. ಮನುಷ್ಯನಿಗೆ ಅವನೊಳಗಿನ ನಿಷ್ಕಳಂಕ ಒಬ್ಬ ಆಪ್ತ ಸ್ನೇಹಿತನ ಬಗ್ಗೆ ಒಂದಿನಿತೂ ನಂಬಿಕೆ ಇಲ್ಲ. ನನ್ನಿಂದ ಸಾಧ್ಯವಿಲ್ಲ ಎನ್ನುವುದರಲ್ಲೇ ಮನುಷ್ಯ ಜೀವನದ ಬಹುತೇಕ ಅಪೂರ್ವ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಾನೆ.
Related Articles
Advertisement
ನಾವು ಇತರರಿಗೆ ನೀಡುವ ನಂಬಿಕೆ, ಪ್ರೀತಿ, ಕಾಳಜಿ, ಮಮತೆ, ವಾತ್ಸಲ್ಯ, ಇತರರೊಂದಿಗೆ ನಾವು ಸಂತಸದಿಂದಿರಲು ಪ್ರಯತ್ನಿಸುವುದು… ಇತ್ಯಾದಿಗಳನ್ನು ಅನಿಯಮಿತವಾಗಿ ಇನ್ನೊಬ್ಬರಿಗೆ ನೀಡುವುದನ್ನೇ ನಿಮ್ಮೊಳಗಿನ ನಿಮ್ಮ ಎಲ್ಲಾ ಸ್ನೇಹಿತರಿಗಿಂತ ಅತ್ಯಾಪ್ತ ಸ್ನೇಹಿತನಿಗೆ ನೀಡುವುದು ಕೂಡ ಬಹಳ ಅವಶ್ಯಕ.
ಮಾನವ ಎಂದಿಗೂ ಇತರರೊಂದಿಗೆ ಅತ್ಯಂತ ಪ್ರೀತಿಯಿಂದ ತನ್ನ ಸಂಬಂಧವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾನೆ. ಆದರೇ, ತನ್ನೊಂದಿಗೆ ತನ್ನ ನೆಂಟಸ್ತಿಗೆಯನ್ನು ಉಳಿಸಿಕೊಳ್ಳುವ ಪ್ರಯತ್ನವೇ ಮಾಡುವುದಿಲ್ಲ.
ಸ್ನೇಹ ಅದೊಂದು ಸಹಚರ್ಯಕ್ಕಿಂತ ಅದು ಆಂತರ್ಯದ ಪ್ರಬಲ ರೂಪ. ಪ್ರೀತಿ, ಸಹಾನುಭೂತಿ, ಅನುಭೂತಿ, ಪ್ರಾಮಾಣಿಕತೆ, ಪರೋಪಕಾರ ಬುದ್ಧಿ, ಪರಸ್ಪರ ಸಾಮರಸ್ಯ ಮತ್ತು ಸಹಾನುಭೂತಿ, ಪರಸ್ಪರ ಸಂತೋಷಕ್ಕಾಗಿ, ನಂಬಿಕೆ, ಮತ್ತು, ತನ್ನದೇ ಎಂದು ಸ್ನೇಹಿತರ ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ಸ್ನೇಹಿತರ ತೀರ್ಪುಗಳನ್ನು ಭಯವಿಲ್ಲದೇ ತಿದ್ದುವ ಸಾಮರ್ಥ್ಯ ಈ ಸ್ನೇಹಕ್ಕಿದೆ. ಆದರೇ, ನಾವು ನಮ್ಮ ಅತ್ಯಾಪ್ತನೊಂದಿಗೆ ಮಾತ್ರ ಈ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳುವುದಕ್ಕೆ ಮುಂದಾಗುವುದಿಲ್ಲ. ಇದು ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಇರುವ ನ್ಯೂನ್ಯತೆ.
ಸ್ನೇಹಗಳಲ್ಲೇ ಅತ್ಯಂತ ಶ್ರೇಷ್ಠವಾದ ಹಾಗೂ ಉತ್ಕೃಷ್ಠವಾದ ಸಂಬಂಧ ಯಾವುದು ಎಂದರೇ, ನೀವು ನಿಮ್ಮ ಜೊತೆಗೆ ಬೆಳೆಸಿಕೊಳ್ಳಬಹುದಾದ ಸಂಬಂಧ ಎನ್ನುವುದರಲ್ಲಿ ಸಂದೇಹವಿಲ್ಲ. ನಿಮ್ಮೊಳಗಿನ ಸ್ನೇಹವೆಂಬ ನಿಮ್ಮ ಮನಸ್ಸು ನಿಮಗೆ ನೋವು ನೀಡುವ ಹಾಗೆ ಬದಲಾಗುವುದಿಲ್ಲ. ಆದರೇ, ನೀವು ಇತರರೊಂದಿಗೆ ಬೆಳೆಸಿಕೊಂಡ ಸ್ನೇಹ ನಿಮಗೆ ನೋವುಂಟು ಮಾಡುವ ಹಾಗೆ ಬದಲಾಗುವ ಸಾಧ್ಯತೆ ಇದೆ.
ನಿಮ್ಮ ಮನಸ್ಸು ನಿಮ್ಮ ಅತ್ಯಾಪ್ತ ಸ್ನೇಹಿತ ..!
ಹೌದು, ಇದು ಹೆಚ್ಚಿನವರಿಗೆ ಈ ವಿಷಯ ಸಾಮಾನ್ಯ ಅಂತನ್ನಿಸಿದರೂ ಇದನ್ನು ಅವರು ವೈಯಕ್ತಿವಾಗಿ ಪಾಲಿಸಿರುವುದಿಲ್ಲ. ತಮ್ಮೆದುರಿಗಿರುವ ನೋವುಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಹರಸಾಹಸ ಪಡುವವರು ಎಷ್ಟೋ ಮಂದಿ ಇದ್ದಾರೆ. ನಾವು ನಮ್ಮ ಮನಸ್ಸಿನೊಂದಿಗೆ ಮಾತಾಡಿ, ಆ ಮನಸ್ಸಿನೊಂದಿಗೆ ಜೀವನದ ಆಪ್ತ ಕ್ಷಣಗಳನ್ನು ಹೇಳಿಕೊಂಡು ಸಂತಸ ಪಟ್ಟಿದ್ದರೇ, ನೋವುಗಳನ್ನು ಹೇಳಿಕೊಂಡು ಸಮಾಧಾನ ಪಟ್ಟುಕೊಂಡಿದ್ದಿದ್ದರೇ ‘ಕೌನ್ಸಿಲಿಂಗ್’ ಎನ್ನುವ ಕಾನ್ಸೆಪ್ಟ್ ಇಲ್ಲಿ ಅಗತ್ಯವೇ ಇರುತ್ತಿರಲಿಲ್ಲ.
ನೀವು ನಿಮ್ಮ ಎಲ್ಲಾ ಭಾವನೆಗಳನ್ನು ನಿಮ್ಮ ಪ್ರೀತಿಯ ಮನಸ್ಸಿನೊಂದಿಗೆ ಹೇಳಿಕೊಂಡರೇ, ನಿಮಗೆ ಯಾವ ಸಮಸ್ಯೆಯೂ ಹತ್ತಿರ ಸುಳಿಯುವುದಿಲ್ಲವೆನ್ನವುದು ಅಪ್ಪಟ ಸತ್ಯ.
ನೀವು ನಿಮ್ಮೊಳಗಿನ ಸ್ನೇಹಿತನೊಂದಿಗೆ ಅಂದರೇ, ನಿಮ್ಮ ಮನಸ್ಸಿನೊಂದಿಗೆ ಮಾತನಾಡಿದಾಗ ವೃದ್ಧಿಯಾಗುವ ಆತ್ಮ ವಿಶ್ವಾಸ, ಯಾವ ಸ್ಪೂರ್ತಿದಾಯಕ ಮಾತುಗಾರ ಅಥವಾ ವಾಗ್ಮಿಯೂ ಕೊಡಲಾರ. ಹಾಗಾಗಿ ನಾವು ಇತರರೊಂದಿಗೆ ಸ್ನೇಹವನ್ನು ಬೆಳಸಿಕೊಳ್ಳುವುದಕ್ಕಿಂತ ಹೆಚ್ಚು ನಮ್ಮೊಳಗಿನ ನಮ್ಮ ಮನಸ್ಸಿನೊಂದಿಗೆ ಎಲ್ಲಾ ನಂಬಿಕೆ, ನಿಯತ್ತು, ಪ್ರೀತಿ, ವಾತ್ಸಲ್ಯ, ಕಾಳಜಿ, ಮಮತೆ ಇರುವ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳುವುದು ಅತಿ ಮುಖ್ಯ.
ಬೇಸರ ಮಾಡಿಕೊಳ್ಳಬೇಡಿ ಒಂದು ನಿಜ ಹೇಳ್ಲಾ..? ‘ಮನಸ್ಸು’ ನಿಮ್ಮ ಅತ್ಯಾಪ್ತ ಸ್ನೇಹಿತ ಅಂತ ನಿಮಗೆ ಗೊತ್ತೇ ಇಲ್ಲ..!
ನಿಮಗೆ ಗೊತ್ತಿರಲಿ, ನಿಮ್ಮೊಳಗಿನ ಸ್ನೇಹಿತನೊಂದಿಗೆ ಮಾತಾಡುವುದು, ಸಂತಸಪಡುವುದು ಹಲವು ದುಃಖಗಳಿಗೆ ಸಮಾಧಾನ ಆಗಬಹುದು. ನಿಮ್ಮ ನಾಳೆಗಳಿಗೆ ಹೊಂಬೆಳಕಿನ ದಾರಿ ಹೆಣೆದುಕೊಡಬಹುದು. ಪ್ಲೀಸ್ ಮಾತಾಡಿ… ಮಾತಾಡಿಸಿ ನೋಡಿ ನಿಮ್ಮೊಳಗಿನ ಆ ಅತ್ಯಾಪ್ತನನ್ನು. ಹೂ ನಗು ನಿಮ್ಮದಾಗುತ್ತದೆ.
-ಶ್ರೀರಾಜ್ ವಕ್ವಾಡಿ
ಇದನ್ನೂ ಓದಿ : ಮೂರು ವರ್ಷದ ಬುದ್ದಿ ನೂರು ವರ್ಷದವರೆಗೆ : ಒಬ್ಬಳೇ ಆಸ್ಪತ್ರೆಗೆ ಆಗಮಿಸಿದ ಪುಟ್ಟ ಪೋರಿ