ಬೆಂಗಳೂರು: ಸಂಪುಟಕ್ಕೆ ಮರು ಸೇರ್ಪಡೆ ಆಗದಿರುವುದಕ್ಕೆ ಬಹಿರಂಗ ಅಸಮಾಧಾನ ಹೊರಹಾಕಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಅದಕ್ಕಾಗಿಯೇ ನಾನು ಅಧಿವೇಶನಕ್ಕೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸೋಮವಾರ ಪಕ್ಷದ ಕಚೇರಿಯಲ್ಲಿ ಭೇಟಿಯಾದ ನಂತರ ಮಾತನಾಡಿದ ಅವರು, ನನಗೆ ಅಸಮಾಧನವಿದೆ, ಸಂಪುಟಕ್ಕೆ ಮರು ಸೇರ್ಪಡೆಯಾಗದಿರುವುದು ನನಗೆ ಬೇಸರ ತರಿಸಿದೆ ಎಂದು ತಿಳಿಸಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಕ್ಲೀನ್‌ಚಿಟ್ ದೊರೆತರೆ ಸಂಪುಟಕ್ಕೆ ಮತ್ತೆ ತೆಗೆದುಕೊಳ್ಳುವುದಾಗಿ ಪಕ್ಷದ ನಾಯಕರು, ಮುಖ್ಯಮಂತ್ರಿಯವರು ಹೇಳಿದ್ದರು. ಇದೀಗ ತೆಗೆದುಕೊಳ್ಳುತ್ತಿಲ್ಲ ಹೀಗಾಗಿ ಸಹಜವಾಗಿ ಬೇಸರವಾಗಿದೆ ಎಂದು ಹೇಳಿದರು.
ಸಂಪುಟಕ್ಕೆ ಸೇರಿಸಿಕೊಳ್ಳುವುದು ಕೇಂದ್ರ ನಾಯಕರಿಗೆ ಬಿಟ್ಟಿದ್ದು. ಆದರೂ ನನಗೆ ಸಚಿವ ಸ್ಥಾನ ನೀಡಲು ವಿಳಂಬ ಮಾಡಲಾಗುತ್ತಿದೆ ಎಂಬುದು ಮುಚ್ಚು ಮರೆ ಇಲ್ಲದೆ ಹೇಳುತ್ತೇನೆ ಎಂದು ತಿಳಿಸಿದರು.
ಬಹಿರಂಗ ಹೇಳಿಕೆ ಹಿನ್ನೆಲೆಯಲ್ಲಿ ಕಟೀಲ್ ಅವರು ಪಕ್ಷದ ಕಚೇರಿಗೆ ಕರೆಸಿಕೊಂಡು ಪಕ್ಷಕ್ಕೆ ಮುಜುಗರ ಉಂಟಾಗುವ ಹೇಳಿಕೆ ನೀಡಬೇಡಿ ಎಂದು ಹೇಳಿದರು ಎಂದು ಹೇಳಲಾಗಿದೆ. ಆದರೂ ಅವರ ಭೇಟಿ ನಂತರ ಅಸಮಾಧಾನ ಹೊರಹಾಕಿದರು.