Advertisement

ಸಿಎಂ ಸ್ಥಾನ ತಪ್ಪಿಸಿದ್ದು ಯಾರು ಎಂದು ಸಿದ್ದುವನ್ನೇ ಕೇಳಿ

11:18 PM May 17, 2019 | Lakshmi GovindaRaj |

ಬೆಂಗಳೂರು: ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಹುದ್ದೆ ಯಾಕೆ ತಪ್ಪಿಸಲಾಯಿತು ಎನ್ನುವ ಪ್ರಶ್ನೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ಕೇಳಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

Advertisement

ಆ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದ ಬಗ್ಗೆ ತಣ್ಣಗಾಗಿದ್ದ ವಿಚಾರವನ್ನು ವಿಶ್ವನಾಥ್‌ ಮತ್ತೆ ಕೆದಕಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರಿಗೂ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಖರ್ಗೆ ಅವರಿಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಾರು ಎಂಬುದು ಸಿದ್ದರಾಮಯ್ಯ ಅವರಿಗೇ ಗೊತ್ತಿದೆ. ಅವರನ್ನೇ ಕೇಳಿ ಎಂದರು.

2013ರಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್‌ನಲ್ಲೇ ಇದ್ದ ವಿಶ್ವನಾಥ, ಮುಖ್ಯಮಂತ್ರಿ ಗಾದಿಗಾಗಿ ನಡೆದಿದ್ದ ಕಸರತ್ತುಗಳಿಗೆ ನೇರ ಸಾಕ್ಷಿಯಾಗಿದ್ದರು. ಹೀಗಾಗಿ, ಅವರ ಹೇಳಿಕೆ ಕುತೂಹಲ ಮೂಡಿಸಿದೆ. ಜೆಡಿಎಸ್‌ನಲ್ಲಿ ಎಚ್‌.ಡಿ.ರೇವಣ್ಣ ಸೇರಿ ಹಲವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ ಎಂಬ ಸಿದ್ದರಾಮಯ್ಯ ಅವರ ಟ್ವೀಟ್‌ ಕುರಿತು ಕೇಳಿದಾಗ, ಅದನ್ನು ನನ್ನನ್ನು ಯಾಕೆ ಕೇಳುತ್ತೀರಿ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next