Advertisement

ಮಾಸ್ಕ್ ಮ್ಯಾಜಿಕ್ : ನೀವೇ ಮಾಡಿ ನೋಡಿ

08:38 AM Apr 29, 2020 | mahesh |

ಕೋವಿಡ್ ವಿರುದ್ಧ ಹೋರಾಡಲು ಸ್ವಚ್ಛತೆ,  ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದೇ ಈಗ ನಮ್ಮ ಮುಂದಿರುವ ಶಸ್ತ್ರಗಳು. ಅದನ್ನು ನಾವೆಲ್ಲರೂ ಪಾಲಿಸುತ್ತಿದ್ದೇವೆ. ಲಾಕ್‌ ಡೌನ್‌ ಎಂದು ಮನೆಯಲ್ಲೇ ಇದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದೇವೆ. ಆಗಾಗ ಕೈ ತೊಳೆಯುತ್ತಾ, ಸ್ವಚ್ಛತೆಯನ್ನೂ ಕಾಪಾಡುತ್ತಿದ್ದೇವೆ. ಸ್ವಲ್ಪ ದಿನಗಳಲ್ಲಿ ಎಲ್ಲವೂ ತಿಳಿಯಾಗಿ, ಎಂದಿನಂತೆ ಕಾಲೇಜು, ಆಫೀಸ್‌ಗೆ ಹೋಗಬೇಕಾದಾಗ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗುತ್ತದೆ. ಆದರೆ, ಮೆಡಿಕಲ್‌ ಮಾಸ್ಕ್ ಅನ್ನು ಒಗೆಯಲು ಅಥವಾ ಮರು ಬಳಕೆ ಮಾಡಲು ಸಾಧ್ಯವಿಲ್ಲ. ಹಾಗಿದ್ದಾಗ, ದಿನವೂ ಹೊರಗೆ ಓಡಾಡುವವರು ಅದೆಷ್ಟು ಮಾಸ್ಕ್ ಗಳನ್ನು ಖರೀದಿಸಲು ಸಾಧ್ಯ? ಮಾಸ್ಕ್ ಗೆ ಬೇಡಿಕೆ ಹೆಚ್ಚಿದೆ ಎಂದಾಕ್ಷಣ, ಅದರ ಬೆಲೆಯೂ ಜಾಸ್ತಿ ಆಗುತ್ತದೆ.
ಹಾಗಾಗಿ, ಮನೆಯಲ್ಲೇ ಮಾಸ್ಕ್ ತಯಾರಿಸಿಕೊಳ್ಳುವುದು ಉತ್ತಮ.

Advertisement

ವಿಡಿಯೋ ನೋಡಿ ಕಲಿಯಿರಿ
ಮಾಸ್ಕ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಸಿಗುತ್ತವೆ. ಅದನ್ನು ನೋಡಿಕೊಂಡು, ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ, ಮಾಸ್ಕ್ತಯಾರಿಸಿಕೊಳ್ಳಿ. ಸಮಯವಿದ್ದವರು, ಕಲೆ- ಕಸೂತಿಯಲ್ಲಿ ಆಸಕ್ತಿ ಇದ್ದವರು, ಮಾಸ್ಕ್ ಮೇಲೆ ಒಂದಷ್ಟು ಡಿಸೈನ್‌ ಮಾಡಬಹುದು. ತೊಟ್ಟ ದಿರಿಸಿಗೆ ಹೋಲುವ ಬಟ್ಟೆಯಿಂದ ಮಾಡಿದ ಮಾಸ್ಕ್, ಡೆನಿಮ್‌ ಬಟ್ಟೆಯಿಂದ ಹೊಲಿದ ಮಾಸ್ಕ್, ಚಿತ್ರಕಲೆ, ಕಸೂತಿ, ಕ್ರೋಶಾ, ನಿಟ್ಟಿಂಗ್‌ ಇತ್ಯಾದಿ ಕೌಶಲ್ಯಗಳಿಂದ ವಿಶಿಷ್ಟ ಬಗೆಯ ಮಾಸ್ಕ್ ಗಳನ್ನು ತಯಾರಿಸಲೂಬಹುದು.

ಗುಣಮಟ್ಟಕ್ಕೆ ಆದ್ಯತೆ ಕೊಡಿ
ಬಿಗಿಯಾದ, ಸಡಿಲವಾದ, ಅಳತೆಗೆ ಮೀರಿದ ದಿರಿಸು ಅಥವಾ ಹಳೆಯ ಉಡುಗೆಗಳಿಂದ ಮಾಸ್ಕ್ ತಯಾರಿಸಬಹುದು. ಈ ಸಂದರ್ಭದಲ್ಲಿ ಅತ್ಯುತ್ತಮ ಗುಣಮಟ್ಟದ ಬಟ್ಟೆ ಬಳಸಲು ಮರೆಯಬಾರದು. ಕೊರೊನಾ ವೈರಸ್‌ ಅಲ್ಲದೆ, ಧೂಳು, ಮಣ್ಣು, ಹೊಗೆ ಮತ್ತು ಕಲುಷಿತ ಗಾಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು, ಮಾಸ್ಕ್ ಗಳು ಸಹಕಾರಿ.

ಫ್ಯಾಷನ್‌ ಲೋಕಕ್ಕೆ ಮಾಸ್ಕ್ ಎಂಟ್ರಿ 
ಹೆಸರಾಂತ ವಸ್ತ್ರವಿನ್ಯಾಸಕರು ಕೂಡ ತಮ್ಮ ಬ್ರಾಂಡ್‌ನ‌ ಕೊರೊನಾ ಮಾಸ್ಕ್ ಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ. ಆನ್‌ಲೈನ್‌ ಮೂಲಕ ಪ್ರಸಾರವಾಗುವ ಫ್ಯಾಶನ್‌ ಶೋಗಳಲ್ಲಿ
ರೂಪದರ್ಶಿಯರು ಅನೇಕ ಬಗೆಯ ಮಾಸ್ಕ್ ಧರಿಸಿ ಕ್ಯಾಟ್‌ವಾಕ್‌ ಮಾಡುತ್ತಿದ್ದಾರೆ. ಅಂದರೆ, ಅಗತ್ಯ ವಸ್ತುಗಳ ಪಟ್ಟಿಗೆ ಸೇರಿದ ಮಾಸ್ಕ್ ಈಗ ಫ್ಯಾಷನ್‌ ಲೋಕಕ್ಕೂ ಲಗ್ಗೆ ಇಟ್ಟಿದೆ. ಮಣಿ, ಮುತ್ತು, ಕಲ್ಲು, ಕನ್ನಡಿ, ಗೆಜ್ಜೆ, ಹೀಗೆ ಅಲಂಕಾರಿಕ ವಸ್ತುಗಳನ್ನು ಪೋಣಿಸಿ, ಅಂಟಿಸಿ ಅಥವಾ ಹೆಣೆದು ಮಾಡಿದ ಮಾಸ್ಕ್ ಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಅಶಕ್ತರಿಗೆ ಮಾಸ್ಕ್ ಕೊಡಿಸಿ, ಜಾಗೃತಿ ಮೂಡಿಸಿ… ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಮಾಸ್ಕ್ ಗಳ ತುರ್ತು ಅಗತ್ಯ ಇರುವವರಿಗಾಗಿ, ಒಳ್ಳೆ ಗುಣಮಟ್ಟದ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗಳನ್ನು ಹಲವರು ಉಚಿತವಾಗಿ ತಲುಪಿಸುತ್ತಿದ್ದಾರೆ. ನೀವು ಕೂಡ ಇಂಥ ಒಳ್ಳೆಯ ಕೆಲಸದಲ್ಲಿ ಕೈ ಜೋಡಿಸಬಹುದು. ನಿಮ್ಮ ಪ್ರೀತಿಪಾತ್ರರಿಗೆ, ನೆರೆ ಹೊರೆಯವರಿಗೆ ಮತ್ತು ಮಾಸ್ಕ್ ಗಳನ್ನು ಖರೀದಿಸಲು ಶಕ್ತರಿಲ್ಲದವರಿಗೆ ಮಾಸ್ಕ್ಗಳನ್ನು ಮಾಡಿ ಕೊಡಿ. ಇದು ಇತರರಿಗೂ ಮಾದರಿಯಾಗಲಿ. ನೀವು ತಯಾರಿಸಿದ ಮಾಸ್ಕ್ ಗಳ ಚಿತ್ರವನ್ನು, ಅವುಗಳನ್ನು ತಯಾರಿಸುವ ವಿಧಾನವನ್ನು ತಿಳಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.

ನಾವೆಲ್ಲಾ ಎಂದೂ ಬಳಸದೇ ಇದ್ದ ಮಾಸ್ಕ್, ಇದೀಗ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿದೆ. ಅಂಗಡಿಗಳಲ್ಲಿಮಾಸ್ಕ್ ದಾಸ್ತಾನು ಮುಗಿದು, ಅದು ಕೈಗೆಟುಕದ ವಸ್ತುವೂ ಆಗಿಬಿಟ್ಟಿದೆ. ಹೀಗಿರುವಾಗ, ಮನೆಯಲ್ಲಿಯೇ ಮಾಸ್ಕ್ ತಯಾರಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಅಗತ್ಯವಿದೆ…

Advertisement

ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next