ನೆಲ್ಯಾಡಿ: ಇಲ್ಲಿಯ ಹೆದ್ದಾರಿ ಬದಿಯ ಬಾರ್ ತೆರವುಗೊಳಿಸಲು ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಅಬಕಾರಿ ಇಲಾಖೆ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿ ಆ. 2ರಂದು ನೆಲ್ಯಾಡಿ ಬಂದ್‌ಗೆ ಕರೆ ನೀಡಲು ಸಜ್ಜಾಗಿದ್ದಾರೆ.
ಈ ಸಂಬಂಧ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಕೃಷ್ಣಭವನ ಹಾಲ್‌ನಲ್ಲಿ ಶನಿವಾರ ಸಭೆ ಸೇರಿ ಚರ್ಚಿಸಿದರು.
ಪೇಟೆಯಲ್ಲಿರುವ ಬಾರ್ ಕಟ್ಟಡದ ಎದುರಿನ ಬಾಗಿಲನ್ನು ಮುಚ್ಚಿ ಹಿಂಭಾಗದಿಂದ ಕಾರ್ಯ ನಿರ್ವಹಿಸುತ್ತಿದೆ. ಇದರ ವಿರುದ್ಧ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ದೂರು ನೀಡಿದವರಿಗೆ ಬೆದರಿಕೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇಲಾಖೆಗಳ ವಿರುದ್ಧ ಒಗ್ಗಟ್ಟಾಗಿ ಆ. 2 ರಂದು ಪೇಟೆಯನ್ನು ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಲಾಯಿತು. ಈ ಕುರಿತು 22 ಮಂದಿ ಪ್ರಮುಖರ ಹೋರಾಟ ಸಮಿತಿ ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಜನಜಾಗೃತಿ ವೇದಿಕೆಯ ನೆಲ್ಯಾಡಿ ವಲಯಾಧ್ಯಕ್ಷ ರವಿಚಂದ್ರ ಹೊಸವಕ್ಲು ರವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನೆಲ್ಯಾಡಿ ಜಿಲ್ಲಾ ಪಂ. ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ತಾ.ಪಂ. ಸದಸ್ಯೆ ಉಷಾ ಅಂಚನ್, ಶಿರಾಡಿ ತಾ.ಪಂ. ಸದಸ್ಯೆ ಆಶಾ ಲಕ್ಷ್ಮಣ್, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಜಯಾನಂದ ಬಂಟ್ರಿಯಾಲ್,ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ನೆಲ್ಯಾಡಿ, ಕೌಕ್ರಾಡಿ ಪಂ. ಸದಸ್ಯರು, ನೀತಿ ತಂಡದ ಅಧ್ಯಕ್ಷ ಜಯನ್, ಧರ್ಮಸ್ಥಳ ಗ್ರಾ.ಯೋಜನೆ ಪುತ್ತೂರು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ಪುತ್ತೂರು ತಾ. ಜನಜಾಗೃತಿ ವೇದಿಕೆಯ ಸದಸ್ಯ ನಾರಾಯಣ ಭಟ್, ಧ.ಗ್ರಾ.ಯೋ. ಮೇಲ್ವಿಚಾರಕ ಧರ್ಣಪ್ಪ ಗೌಡ, ಕೆಡಿಪಿ ಸದಸ್ಯ ಇಸ್ಮಾಯಿಲ್ , ಜನಜಾಗೃತಿ ವೇದಿಕೆ ತಾಲೂಕು ಸಮಿತಿ ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ, ಹಿಂದೂ ಜಾಗರಣ ವೇದಿಕೆ ಪ್ರಮುಖ ರವಿಪ್ರಸಾದ್ ಶೆಟ್ಟಿ, ಬೇಬಿ ಸದಾನಂದ್, ನವಜೀವನ ಸಮಿತಿಯ ನೇಮಣ್ಣ ಕಲಾಯಿ, ಸುರೇಶ್, ನೆಲ್ಯಾಡಿ ವಲಯದ ದೇಗುಲ,ಮಸೀದಿ,ಚರ್ಚ್‌ಗಳ ಪ್ರಮುಖರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಪುತ್ತೂರು ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ, ನಿರೂಪಿಸಿದರು.