Advertisement

ಆಸೀಸ್‌ನಲ್ಲಿ ಕೇರಳದ ವ್ಯಕ್ತಿಗೆ ಜನಾಂಗೀಯ ನಿಂದನೆ, ಹಲ್ಲೆ

03:45 AM Mar 27, 2017 | Team Udayavani |

ಮೆಲ್ಬರ್ನ್: ಅಮೆರಿಕದಲ್ಲಿ ಜನಾಂಗೀಯ ಹಲ್ಲೆಗಳ ಸಂಖ್ಯೆ ಹೆಚ್ಚಳದಿಂದ ಭಾರತೀಯರು ಭೀತಿಗೊಳಗಾಗಿರುವ ನಡುವೆಯೇ ಆಸ್ಟ್ರೇಲಿಯಾದಲ್ಲೂ ಭಾರತೀಯರೊಬ್ಬರ ಮೇಲೆ ಜನಾಂಗೀಯ ನಿಂದನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಇಲ್ಲಿನ ನಾರ್ತ್‌ ಹೋಬರ್ಟ್‌ನಲ್ಲಿ ಕೇರಳದ ವ್ಯಕ್ತಿಯೊಬ್ಬರ ಮೇಲೆ ಕೆಲವು ಯುವಕರ ಗುಂಪೊಂದು, “ನೀವು ಅನಿಷ್ಟ ಕಪ್ಪುವರ್ಣೀಯ ಭಾರತೀಯರು'(ಯೂ ಬ್ಲಿಡೀ ಬ್ಲ್ಯಾಕ್‌ ಇಂಡಿಯನ್ಸ್‌) ಎಂದು ನಿಂದಿಸಿದ್ದಲ್ಲದೆ, ಅವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ. ಕೊಟ್ಟಾಯಂನ ಪುತ್ತುಪ್ಪಳ್ಳಿಯವರಾದ ಲಿ ಮ್ಯಾಕ್ಸ್‌ ಜಾಯ್‌(33) ಆಸ್ಟ್ರೇಲಿಯಾದಲ್ಲಿ ನರ್ಸಿಂಗ್‌ ಕೋರ್ಸ್‌ ಮಾಡುತ್ತಿದ್ದು, ಅರೆಕಾಲಿಕ ಟ್ಯಾಕ್ಸಿ ಚಾಲಕನಾಗಿಯೂ ದುಡಿಯುತ್ತಿದ್ದಾರೆ.

 “ಭಾನುವಾರ ಟೀ ಕುಡಿಯಲೆಂದು ಮ್ಯಾಕ್‌ಡೊನಾಲ್ಡ್‌ ರೆಸ್ಟೋರೆಂಟ್‌ಗೆ ಹೋಗಿದ್ದಾಗ, ಒಬ್ಬ ಯುವತಿ ಸೇರಿದಂತೆ ಐವರ ಗುಂಪೊಂದು ರೆಸ್ಟೋರೆಂಟ್‌ನ ಕಾರ್ಮಿಕನೊಂದಿಗೆ ಜಗಳಕ್ಕಿಳಿದಿತ್ತು. ನನ್ನನ್ನು ನೋಡಿದೊಡನೆ, ನನ್ನತ್ತ ತಿರುಗಿದ ಅವರು ಒಂದೇ ಸಮನೆ ನಿಂದಿಸತೊಡಗಿದರು. ಅಲ್ಲಿದ್ದ ಇತರರು ಪೊಲೀಸರಿಗೆ ಕರೆ ಮಾಡಿದೊಡನೆ, ಇವರು ಅಲ್ಲಿಂದ ಕಾಲ್ಕಿತ್ತರು. ಅದಾದ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ರೆಸ್ಟೋರೆಂಟ್‌ಗೆ ನುಗ್ಗಿ ಹಲ್ಲೆ ನಡೆಸಿದರು,’ ಎಂದು ಜಾಯ್‌ ಆರೋಪಿಸಿದ್ದಾರೆ. ಇತ್ತೀಚೆಗೆ ಜನಾಂಗೀಯ ನಿಂದನೆಗಳು ಹೆಚ್ಚಾಗುತ್ತಿವೆ. 

ಹಲವು ಚಾಲಕರಿಗೆ ಇಂಥ ಅನುಭವಗಳಾಗಿವೆ. ಆದರೆ, ಅವರು ಪೊಲೀಸರಿಗೆ ದೂರು ನೀಡುತ್ತಿಲ್ಲ ಎಂದಿದ್ದಾರೆ ಜಾಯ್‌. ಕಳೆದ ವಾರವಷ್ಟೇ ಮೆಲ್ಬರ್ನ್ನ ಚರ್ಚ್‌ ನಲ್ಲಿ ಕೇರಳದ ಮೂಲದ ಕ್ಯಾಥೊಲಿಕ್‌ ಧರ್ಮಗುರು ವೊಬ್ಬರಿಗೆ ಇರಿಯಲಾಗಿತ್ತು.  ಭಾರತೀಯ ಎಂಬ ಕಾರಣಕ್ಕಾಗಿ ಚೂರಿ ಇರಿದೆ ಎಂದು ದಾಳಿಕೋರ ಹೇಳಿಕೆ ನೀಡಿದ್ದ. ಇದಾದ ಬೆನ್ನಲ್ಲೇ ಇದೀಗ ಮತ್ತೂಂದು ದಾಳಿ ನಡೆದಿದೆ. ಇದೇ ವೇಳೆ, ದಾಳಿಯನ್ನು ಕೊಟ್ಟಾಯಂ ಸಂಸದ ಜೋಸ್‌ ಕೆ ಮಣಿ ಖಂಡಿಸಿದ್ದು, ಈ ಕುರಿತು ವಿದೇಶಾಂಗ ಸಚಿವಾಲಯದೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next