Advertisement

ಏಶ್ಯನ್‌ ಕುಸ್ತಿ ಸುನಿಲ್‌ಗೆ ಚಿನ್ನ: 27 ವರ್ಷ ಬಳಿಕ ಭಾರತಕ್ಕೆ ಒಲಿದ ಮೊದಲ ಚಿನ್ನ

08:55 AM Feb 20, 2020 | sudhir |

ಹೊಸದಿಲ್ಲಿ: ಭಾರತದ ಸುನಿಲ್‌ ಕುಮಾರ್‌ ಅವರು ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರಿಕೊ-ರೋಮನ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಇದು ಕಳೆದ 27 ವರ್ಷಗಳಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನವಾಗಿದೆ.

Advertisement

87 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸುನಿಲ್‌ ಅವರು ಕಿರ್ಗಿಸ್ಥಾನದ ಅಜತ್‌ ಸಲಿದಿನೋವ್‌ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಸತತ ಎರಡನೆ‌à ಬಾರಿ ಫೈನಲಿಗೇರಿದ ಸಾಧನೆ ಮಾಡಿದ್ದ ಸುನಿಲ್‌ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟರು. 2019ರಲ್ಲಿ ನಡೆದ ಕೂಟದಲ್ಲಿ ಫೈನಲಿಗೇರಿದ್ದ ಅವರು ಅಂತಿಮ ಸೆಣಸಾಟದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದರು.

ಸೆಮಿಯಲ್ಲಿ ಕಠಿನ ಹೋರಾಟ
ಸೆಮಿಫೈನಲ್‌ ಹೋರಾಟದಲ್ಲಿ ಸುನಿಲ್‌ ಕಠಿನ ಹೋರಾಟ ಎದುರಿಸಿದ್ದರು. ಕಜಾಕ್‌ಸ್ಥಾನದ ಅಜಾಮತ್‌ ಕುಸ್ತುಬಯೇವ್‌ ಪ್ರಬಲ ಸವಾಲು ನೀಡಿದ್ದರು. ಒಂದು ಹಂತದಲ್ಲಿ ಸುನಿಲ್‌ 1-8 ಅಂಕಗಳಿಂದ ಹಿನ್ನೆಡೆಯಲ್ಲಿದ್ದರು. ಆದರೆ ಆಬಳಿಕ ಪ್ರಚಂಡ ನಿರ್ವಹಣೆ ನೀಡಿದ ಅವರು ಸತತ 11 ಅಂಕಗಳನ್ನು ಗೆಲ್ಲುತ್ತ 12-8ರಿಂದ ಕುಸ್ತುಬಯೇವ್‌ ಅವರನ್ನು ನೆಲಕ್ಕುರುಳಿಸಿ ಫೈನಲಿಗೇರಿದ್ದರು.
ಭಾರತದ ಇನ್ನೋರ್ವ ಕುಸ್ತಿಪಟು ಅರ್ಜುನ್‌ ಹಲಕುರ್ಕಿ ಅವರು 55 ಕೆ.ಜಿ. ಗ್ರಿಕೊ-ರೋಮನ್‌ ವಿಭಾಗದಲ್ಲಿ ಕಂಚು ಜಯಿಸಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ಇರಾನ್‌ನ ನಾಸೆರ್‌ಪೌರ್‌ ವಿರುದ್ಧ 7-1 ಮುನ್ನಡೆಯಲ್ಲಿದ್ದರೂ ಅಂತಿಮವಾಗಿ 7-8 ಅಂಕಗಳಿಂದ ಶರಣಾಗಿದ್ದರು.

ಮಾಸ್ಕ್ ಧರಿಸಿ ಸ್ಪರ್ಧೆ
ಕೊರೊನಾ ವೈರಸ್‌ನ ಭೀತಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಜಪಾನ್‌, ಕೊರಿಯ ಮತ್ತು ಚೈನೀಸ್‌ ತೈಪೆಯ ಕೆಲವು ಕುಸ್ತಿತಾರೆಯರು ಮಾಸ್ಕ್ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next