ರಾಜ್‌ಗಿರ್ (ಬಿಹಾರ): ವನಿತಾ ಏಷ್ಯನ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ಸತತ 2ನೇ ಗೆಲುವು ದಾಖಲಿಸಿದೆ. ಮಂಗಳವಾರದ ಜಿದ್ದಾಜಿದ್ದಿ ಸೆಣಸಾಟ ದಲ್ಲಿ ದಕ್ಷಿಣ ಕೊರಿಯಾವನ್ನು 3-2 ಗೋಲುಗಳಿಂದ ಮಣಿಸಿದೆ.
ಮೊದಲಾರ್ಧದಲ್ಲಿ ಭಾರತ 2-0 ಮುನ್ನಡೆ ಸಾಧಿಸಿತ್ತು. ಸಂಗೀತಾ ಕುಮಾರಿ 3ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. 20ನೇ ನಿಮಿಷದಲ್ಲಿ ದೀಪಿಕಾ ಈ ಮುನ್ನಡೆಯನ್ನು ವಿಸ್ತರಿಸಿದರು.
3ನೇ ಕ್ವಾರ್ಟರ್‌ನಲ್ಲಿ ಕೊರಿಯಾ ಭರ್ಜರಿ ಪುನರಾಗಮನ ಸಾರಿತು. ಯುರೀ ಲೀ ಮತ್ತು ನಾಯಕಿ ಎಯುನ್‌ಬಿ ಶೆಯಾನ್ ಸೇರಿಕೊಂಡು ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು.
ಅನಂತರ ಹೋರಾಟ ಇನ್ನಷ್ಟು ತೀವ್ರ ಗೊಂಡಿತು. ಪಂದ್ಯ ಡ್ರಾಗೊಳ್ಳುವುದು ಬಹುತೇಕ ಖಚಿತ ಎಂಬ ಸ್ಥಿತಿ ನಿರ್ಮಾಣಗೊಂಡಿತು. ಆದರೆ 57ನೇ ನಿಮಿಷದಲ್ಲಿ ದೀಪಿಕಾ ಕೊರಿಯಾ ಕೋಟೆಗೆ ಲಗ್ಗೆ ಹಾಕಿ ತಂಡದ 3ನೇ ಹಾಗೂ ವೈಯಕ್ತಿಕ 2ನೇ ಗೋಲು ಸಿಡಿಸಿ ಗೆಲುವನ್ನು ಸಾರಿದರು.
ಭಾರತವಿನ್ನು ಗುರುವಾರ ಥಾಯ್ಲೆಂಡ್ ವಿರುದ್ಧ ಆಡಲಿದೆ. ಮಂಗಳ ವಾರದ ಥಾಯ್ಲೆಂಡ್-ಜಪಾನ್ ಪಂದ್ಯ 1-1ರಿಂದ ಡ್ರಾಗೊಂಡಿತು. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಚೀನ 5-0 ಅಂತರದಿಂದ ಮಲೇಷ್ಯಾವನ್ನು ಮಣಿಸಿ ಸತತ 2ನೇ ಗೆಲುವು ದಾಖಲಿಸಿತು.