Advertisement

ಉದ್ದೀಪನ: ಏಶ್ಯನ್‌ ಬಂಗಾರ ವಿಜೇತೆ ಮನ್‌ಪ್ರೀತ್‌ ಕೌರ್‌ಗೆ 4 ವರ್ಷ ನಿಷೇಧ

01:22 AM Apr 10, 2019 | sudhir |

ಹೊಸದಿಲ್ಲಿ: ಭುವನೇಶ್ವರದಲ್ಲಿ 2017ರಲ್ಲಿ ನಡೆದಿದ್ದ ಏಶ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಶಾಟ್‌ಪುಟ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದ ಮನ್‌ಪ್ರೀತ್‌ ಕೌರ್‌ ಈಗ ಉದ್ದೀಪನ ಬಲೆಗೆ ಬಿದ್ದಿದ್ದಾರೆ. ನಾಡಾದಿಂದ (ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ) 4 ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದಾರೆ. ಮಾತ್ರವಲ್ಲ, ಗೆದ್ದಿರುವ ಎಲ್ಲ ಪದಕಗಳನ್ನು ಕಳೆದುಕೊಳ್ಳಲಿದ್ದಾರೆ.

Advertisement

29 ವರ್ಷದ ಹರ್ಯಾಣದ ಶಾಟ್‌ಪುಟ್‌ ಸ್ಪರ್ಧಿ ಏಶ್ಯನ್‌ ಆ್ಯತ್ಲೆಟಿಕ್ಸ್‌ ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಉದ್ದೀಪನ ಪರೀಕ್ಷೆಗೆ ಒಳಗಾಗಿದ್ದರು. ಅಲ್ಲಿ ಅನುತ್ತೀರ್ಣಗೊಂಡಿದ್ದರಿಂದ 2017ರಿಂದ ತಾತ್ಕಾಲಿಕ ಅಮಾನತಿಗೆ ಒಳಗಾಗಿದ್ದರು. ಇದೀಗ ಮತ್ತೂಂದು ಪರೀಕ್ಷೆಯಲ್ಲೂ ಮನ್‌ಪ್ರೀತ್‌ ವಿಫ‌ಲರಾಗಿದ್ದಾರೆ. ಈ ವರದಿಯನ್ನು ಉದ್ದೀಪನ ನಿಗ್ರಹ ಸಂಸ್ಥೆಯ ಶಿಸ್ತು ಸಮಿತಿ (ಎಡಿಡಿಪಿ) ದೃಢಪಡಿಸಿದೆ.

2017ರಿಂದಲೇ ಶಿಕ್ಷೆ ಜಾರಿ
ಮನ್‌ಪ್ರೀತ್‌ ಕೌರ್‌ ಮೇಲಿನ ನಿಷೇಧ ಶಿಕ್ಷೆ 2017ರಿಂದಲೇ ಜಾರಿಯಾಗಲಿದೆ ಎಂದು ನಾಡಾದ ಪ್ರಧಾನ ನಿರ್ದೇಶಕ ನವೀನ್‌ ಅಗರ್ವಾಲ್‌ ತಿಳಿಸಿದ್ದಾರೆ. 2017ರಿಂದ ಅನ್ವಯಿಸುವಂತೆ ಮನ್‌ಪ್ರೀತ್‌ ಅವರ ಎಲ್ಲ ದಾಖಲೆ, ಪದಕಗಳನ್ನು ಮುಟ್ಟುಗೋಲು ಹಾಕಲಾಗುವುದು. ಶಿಕ್ಷೆಯನ್ನು ಅನುಭವಿಸುವ ಮೊದಲು ಮನ್‌ಪ್ರೀತ್‌ಗೆ ಇನ್ನೊಂದು ಸಲ ಮೇಲ್ಮನವಿ ಸಲ್ಲಿಸುವ ಅವಕಾಶ ಇರುತ್ತದೆ ಎಂದು ನಾಡಾ ತಿಳಿಸಿದೆ.

ಮನ್‌ಪ್ರೀತ್‌ ಏಶ್ಯನ್‌ ಗ್ರ್ಯಾನ್‌ಪ್ರಿ, ಫೆಡರೇಷನ್‌ ಕಪ್‌, ಏಶ್ಯನ್‌ ಆ್ಯತ್ಲೆಟಿಕ್ಸ್‌, ಅಂತರಾಜ್ಯ ಆ್ಯತ್ಲೆಟಿಕ್ಸ್‌ನಲ್ಲಿ ಪಾಲ್ಗೊಂಡು ಚಿನ್ನದ ಪದಕ ಗೆದ್ದಿದ್ದರು. ನಾಲ್ಕರಲ್ಲೂ ಪರೀಕ್ಷೆಗೆ ಒಳಗಾಗಿದ್ದಾಗ ನಿಷೇಧಿತ ಸ್ಟೀರಾಯ್ಡ ಸೇವಿಸಿರುವುದು ಕಂಡುಬಂದಿತ್ತು. 4 ವರ್ಷ ನಿಷೇಧಕ್ಕೆ ಗುರಿಯಾಗಿರುವುದರಿಂದ ಮನ್‌ಪ್ರೀತ್‌ ಕ್ರೀಡಾ ಬದುಕು ಬಹುತೇಕ ಮುಗಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next