ಹ್ಯಾಂಗ್ ಝೂ: ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಟೆನ್ನಿಸ್ ಮಿಶ್ರ ಡಬಲ್ಸ್ ಮತ್ತು ಪುರುಷರ ಸ್ಕ್ವಾಷ್ ನಲ್ಲಿ ಭಾರತದ ಕ್ರೀಡಾಪಟುಗಳು ಬಂಗಾರದ ಪದಕ ಗೆದ್ದುಕೊಂಡಿದ್ದಾರೆ.
ಟೆನ್ನಿಸ್ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರು ಚೈನೀಸ್ ತೈಪೆ ವಿರುದ್ಧ 2-6 6-3 10-4 ಗೆಲುವು ಸಾಧಿಸುವ ಮೂಲಕ ಮಿಶ್ರ ಡಬಲ್ಸ್ ಚಿನ್ನವನ್ನು ಪಡೆದರು.
ಮೊದಲ ಸೆಟ್ ಅನ್ನು 2-6 ರಲ್ಲಿ ಕಳೆದುಕೊಂಡ ನಂತರ, ಭಾರತ ತಂಡವು ಪ್ರಭಾವಶಾಲಿ ಪುನರಾಗಮನ ಮಾಡಿತು. ಎರಡನೇ ಸೆಟ್ ಗೆದ್ದು ಪಂದ್ಯವನ್ನು ನಿರ್ಣಾಯಕ ಟೈ-ಬ್ರೇಕರ್ ಗೆ ಕೊಂಡೊಯ್ಯಿತು. 1 ಗಂಟೆ 14 ನಿಮಿಷಗಳ ರೋಚಕ ಸ್ಪರ್ಧೆಯಲ್ಲಿ ಭಾರತದ ಜೋಡಿ ಟೈ ಬ್ರೇಕರ್ ನಲ್ಲಿ ಪ್ರಾಬಲ್ಯ ಮೆರೆದರು, ಅಂತಿಮವಾಗಿ 10-4 ರಲ್ಲಿ ಗೆದ್ದು ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು. ಈ ಗೆಲುವು 21 ನೇ ಶತಮಾನದಲ್ಲಿ ಆರು ಏಷ್ಯನ್ ಗೇಮ್ಸ್ ಆವೃತ್ತಿಗಳಲ್ಲಿ ಕನಿಷ್ಠ ಒಂದು ಚಿನ್ನದ ಪದಕವನ್ನು ಸಾಧಿಸಿದ ಭಾರತದ ದಾಖಲೆಯನ್ನು ಮುಂದುವರೆಸಿದೆ.
ಪಾಕ್ ಸೋಲಿಸಿ ಸ್ಕ್ವಾಷ್ ಚಿನ್ನ: ಪುರುಷರ ಸ್ಕ್ವಾಷ್ ನಲ್ಲಿ ಭಾರತೀಯ ತಂಡವು ಐದು ಸೆಟ್ ಗಳ ಥ್ರಿಲ್ಲರ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಮೊದಲ ಸ್ಥಾನ ಪಡೆಯಿತು. ಮೂರು ಬೆಸ್ಟ್ ಆಫ್ ಥ್ರೀ ಫೈನಲ್ ಸ್ಪರ್ಧೆಯಲ್ಲಿ ಭಾರತ 2-1 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ಚಿನ್ನವನ್ನು ತನ್ನದಾಗಿಸಿಕೊಂಡಿತು.
ಸೌರವ್ ಘೋಶಾಲ್, ಅಭಯ್ ಸಿಂಗ್ ಮತ್ತು ಮಹೇಶ್ ಮಂಗೋಂಕರ್ ಅವರನ್ನೊಳಗೊಂಡ ಸ್ಕ್ವಾಷ್ ತಂಡವು ಚಿನ್ನದ ಪದಕ ಪಡೆಯಿತು. ಮೊದಲ ಸೆಟ್ ನಲ್ಲಿ ಪಾಕಿಸ್ತಾನ ಗೆದ್ದರೂ ನಂತರ ಸತತ ಎರಡು ಪಂದ್ಯ ಗೆದ್ದ ಭಾರತ ರೋಮಾಂಚಕ ಫೈನಲ್ ತನ್ನದಾಗಿಸಿಕೊಂಡಿತು.