ಕುವೈಟ್/ಬೀಜಿಂಗ್: ಮುಂದೂಡಲ್ಪಟ್ಟ ಏಷ್ಯಾಡ್ ಪಂದ್ಯಾವಳಿಯ ನೂತನ ದಿನಾಂಕವನ್ನು “ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ’ (ಒಸಿಎ) ಮಂಗಳವಾರ ಪ್ರಕಟಿಸಿದೆ.
19ನೇ ಆವೃತ್ತಿಯ ಈ ಪಂದ್ಯಾವಳಿ ಮುಂದಿನ ವರ್ಷದ ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರ ತನಕ ಚೀನದ ಹಾಂಗ್‌ಝೂನಲ್ಲಿ ನಡೆಯಲಿದೆ.
ಮೂಲ ವೇಳಾಪಟ್ಟಿಯಂತೆ ಏಷ್ಯನ್ ಗೇಮ್ಸ್ ಇದೇ ವರ್ಷದ ಸೆಪ್ಟಂಬರ್ 10ರಿಂದ 25ರ ತನಕ ಹಾಂಗ್‌ಝೂನಲ್ಲಿ ನಡೆಯಬೇಕಿತ್ತು. ಆದರೆ ಚೀನದಲ್ಲಿ ಕೊರೊನಾ ಕೇಸ್ ಹೆಚ್ಚಿದ ಕಾರಣ ಇದನ್ನು ಮುಂದೂಡಲಾಯಿತು.
“ಇದಕ್ಕಾಗಿ ವಿಶೇಷ ಸಮಿತಿಯೊಂದನ್ನು ರಚಿಸಲಾಗಿತ್ತು. ಚೈನೀಸ್ ಒಲಿಂಪಿಕ್ ಕಮಿಟಿ, ಹಾಂಗ್‌ಝೂ ಏಷ್ಯನ್ ಗೇಮ್ಸ್ ಸಂಘಟನ ಸಮಿತಿ ಹಾಗೂ ಇತರ ಕ್ರೀಡಾ ಮಂಡಳಿಗಳ ಪ್ರಮುಖರೊಂದಿಗೆ ಸತತ ಮಾತುಕತೆ ನಡೆಸಿದ ಬಳಿಕ ದಿನಾಂಕವನ್ನು ಅಂತಿಮಗೊಳಿಸಲಾಯಿತು. ಬೇರೆ ಕ್ರೀಡಾಕೂಟಗಳಿಗೆ ಅಡಚಣೆಯಾಗದ ರೀತಿಯಲ್ಲಿ ಏಷ್ಯಾಡ್ ಕೂಟವನ್ನು ಆಯೋಜಿಸಲಾಗುತ್ತದೆ’ ಎಂಬುದಾಗಿ ಒಸಿಎ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ವಿಶ್ವ ಕುಸ್ತಿಗೆ ಅಡ್ಡಿ
ಆದರೆ ರಷ್ಯಾದ ಕ್ರಸ್ನೋಯಾಸ್ಕ್ìನಲ್ಲಿ 2023ರ ಸೆ. 16ರಿಂದ 24ರ ತನಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ನಡೆಯಲಿದ್ದು, ಇದರಿಂದ ಕುಸ್ತಿಪಟುಗಳ ಪ್ರಯಾಣ ಹಾಗೂ ಸಿದ್ಧತೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದು ಒಲಿಂಪಿಕ್ ಅರ್ಹತಾ ಸುತ್ತಿನ ಸ್ಪರ್ಧೆಯೂ ಆಗಿದೆ. ಇದರಿಂದ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಸೇರಿದಂತೆ ವಿಶ್ವದ ಕೆಲವು ಕುಸ್ತಿ ಫೆಡರೇಶನ್‌ಗಳು ಏಷ್ಯಾಡ್‌ನ ಪರಿಷ್ಕೃತ ವೇಳಾಪಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿವೆ.