ಹೊಸದಿಲ್ಲಿ: ಪ್ರತಿಷ್ಠಿತ ಏಶ್ಯಾಡ್ ಪಂದ್ಯಾವಳಿಗಾಗಿ ಜಕಾರ್ತಾಕ್ಕೆ ಹೊರಟು ನಿಂತ ಭಾರತದ ಸ್ಪರ್ಧಿಗಳನ್ನು ಬೀಳ್ಕೊಡುವ ಕಾರ್ಯಕ್ರಮ ಶುಕ್ರವಾರ ನಡೆಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, “ಈ ಮೆಗಾ ಕೂಟದಲ್ಲಿ ನಿಮ್ಮೆಲ್ಲರ ಮೇಲೆ ಮಹತ್ವದ ಜವಾಬ್ದಾರಿ ಇದೆ. ಇದನ್ನು ಯಶಸ್ವಿಯಾಗಿ ನಿಭಾಯಿಸಿ ದೇಶದ ಹಿರಿಮೆಯನ್ನು ಎತ್ತಿ ಹಿಡಿಯಿರಿ’ ಎಂದು ಶುಭ ಹಾರೈಸಿದರು. ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ ಈ ಕಾರ್ಯ ಕ್ರಮವನ್ನು ಆಯೋಜಿಸಿತ್ತು.
ಮುಂದಿನ ಶನಿವಾರದಿಂದ ಜಕಾರ್ತಾ ಹಾಗೂ ಪಾಲೆಂಬಾಂಗ್‌ನಲ್ಲಿ ಆರಂಭ ವಾಗಲಿರುವ ಈ ಕೂಟದಲ್ಲಿ ಭಾರತದ 572 ಆ್ಯತ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಅಧಿಕಾರಿಗಳು, ತರಬೇತುದಾರರೆಲ್ಲ ಸೇರಿ 800ಕ್ಕೂ ಅಧಿಕ ಮಂದಿ ಈ “ಕ್ರೀಡಾ ನಿಯೋಗ’ದಲ್ಲಿದ್ದಾರೆ. ಒಟ್ಟು 36 ಕ್ರೀಡೆಗಳಲ್ಲಿ ಭಾರತ ಸ್ಪರ್ಧಿಸಲಿದೆ.
“ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ನಿಮ್ಮೆಲ್ಲರ ಪಾಲಿನ ಹೆಮ್ಮೆ ಹಾಗೂ ಪ್ರತಿಷ್ಠೆಯ ಸಂಗತಿ. ಗೇಮ್ಸ್‌ನಲ್ಲಿ ಪಾಲ್ಗೊಳ್ಳುವಾಗ, ಕ್ರೀಡಾಗ್ರಾಮದಲ್ಲಿ ಉಳಿಯುವಾಗ ನಿಮ್ಮ ವೈಯಕ್ತಿಕ ಖ್ಯಾತಿ, ಪ್ರತಿಷ್ಠೆಗಳೆಲ್ಲ ಮುಖ್ಯವಾಗುವುದಿಲ್ಲ. ಅಲ್ಲಿ ಮುಖ್ಯ ವಾಗುವುದು ಒಂದೇ-ಅದು ಇಂಡಿಯಾ. ನೀವು ನೂರಾರು ಕೋಟಿ ಜನಸಂಖ್ಯೆಯುಳ್ಳ ದೇಶವನ್ನು ಪ್ರತಿನಿಧಿಸುತ್ತಿದ್ದೀರಿ ಎಂಬುದನ್ನು ಮರೆಯಬಾರದು’ ಎಂದು ಒಲಿಂಪಿಕ್ ಪದಕ ವಿಜೇತ ಶೂಟರ್ ಕೂಡ ಆಗಿರುವ ರಾಥೋಡ್ ಹಿತವಚನ ಹೇಳಿದರು.
ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ
“ಹಿಂದಿನ ಸಲಕ್ಕಿಂತ ಹೆಚ್ಚಿನ ಪದಕ ಗೆಲ್ಲುವುದು ನಿಮ್ಮ ಗುರಿಯಾಗಿರಲಿ. ಹಾಗೆಯೇ ಫಲಿತಾಂಶದ ಬಗ್ಗೆ ಭಾರೀ ಚಿಂತೆ ಮಾಡದಿರಿ, ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇರಲಿ. ಫಲಿತಾಂಶ ತನ್ನಿಂತಾನಾಗಿ ಬರುತ್ತದೆ’ ಎಂದೂ ರಾಥೋಡ್ ಹೇಳಿದರು. ಸಮಾರಂಭದಲ್ಲಿ ಐಒಎ ಅಧ್ಯಕ್ಷ ನರೀಂದರ್ ಬಾತ್ರಾ, ಕಾರ್ಯದರ್ಶಿ ರಾಜೀವ್ ಮೆಹ್ತಾ, ಭಾರತೀಯ ಕ್ರೀಡಾ ನಿಯೋಗದ ಚೆಫ್ ಡಿ ಮಿಷನ್ ಬೃಜ್ ಭೂಷಣ್ ಸಿಂಗ್ ಸರಣ್ ಮೊದಲಾದವರು ಉಪಸ್ಥಿತರಿದ್ದರು.