ಹ್ಯಾಂಗ್‌ಝೂ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಭಾರತದ ಸ್ಟಾರ್ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಅವರಿಗೆ ತೀವ್ರ ಪೈಪೋಟಿ ನೀಡಿದ ಭಾರತದ ಇನ್ನೋರ್ವ ಕಿಶೋರ್ ಜೆನಾ ಬೆಳ್ಳಿಯ ಪದಕವನ್ನು ಗೆದ್ದು ಸಂಭ್ರಮಿಸಿದರು.
ನೀರಜ್ ಚೋಪ್ರಾ ಅವರು ಕಿಶೋರ್ ಜೆನಾ ಅವರ ವೈಯಕ್ತಿಕ ಉತ್ತಮವಾದ 86.77 ಮೀ ಅನ್ನು ಮೀರಿಸಿ 88.88 ಮೀ ಅವರ ಋತುವಿನ ಅತ್ಯುತ್ತಮ ದೂರವನ್ನು ಎಸೆದರು. ಮೊದಲು ನೀರಜ್ ಚೋಪ್ರಾ ಅವರು ಜಾವೆಲಿನ್ ಅನ್ನು ಬಹಳ ದೂರಕ್ಕೆ ಎಸೆಯಲು ಅದ್ಭುತವಾದ ಮೊದಲ ಪ್ರಯತ್ನವನ್ನು ಮಾಡಿದರು ಆದರೆ ತಾಂತ್ರಿಕ ದೋಷದಿಂದಾಗಿ ದೂರವನ್ನು ದಾಖಲಿಸಲು ಸಾಧ್ಯವಾಗಲಿಲ್ಲ.
ಒಟ್ಟಿನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತೀಯರ ನಡುವೆಯೇ ತೀವ್ರ ಸ್ಪರ್ಧೆ ಕಂಡು ಬಂದಿತು. ಈ ನಡುವೆ ಕಿಶೋರ್ ಜೆನಾ ಅವರು ಉತ್ತಮ ಥ್ರೋ ಮಾಡಿದರೂ ಅಧಿಕಾರಿಯಿಂದ ಅವರಿಗೆ ಕೆಂಪು ಬಾವುಟ ತೋರಿಸಿದರು. ಭಾರತೀಯರು ಪ್ರತಿಭಟಿಸಿದರು ಮತ್ತು ಕೆಲವು ಚರ್ಚೆಯ ನಂತರ, ಎಸೆಯುವಿಕೆ ಸರಿಯಾಗಿದೆ ಎಂದು ನಿರ್ಧರಿಸಲಾಯಿತು. 79.76 ಮೀ.ದೂರಕ್ಕೆ ಎಸೆದಿದ್ದರು.
ಪುರುಷರ 4×400 ಮೀ ರಿಲೇಯಲ್ಲಿ ಭಾರತವು ಚಿನ್ನದ ಪದಕವನ್ನು ಗೆದ್ದಿದೆ. 3:01.58 ಸಮಯದಲ್ಲಿ ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿತು. ಮಹಮ್ಮದ್ ಅನಸ್, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್ ವರಿಯತ್ತೋಡಿ ಮತ್ತು ರಾಜೇಶ್ ರಮೇಶ್ ಅವರ ತಂಡ ಚಿನ್ನದ ಗುರಿ ತಲುಪಿದೆ. ಇದರೊಂದಿಗೆ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 81 ಪದಕಗಳನ್ನು ಗೆದ್ದಂತಾಗಿದೆ.
ಮಹಿಳೆಯರ 800 ಮೀ. ಓಟದಲ್ಲಿ ಭಾರತದ ಹರ್ಮಿಲನ್ ಬೇನ್ಸ್ , ಅವಿನಾಶ್ ಸೇಬಲ್ (ಪುರುಷರ 5000 ಮೀ) ಮತ್ತು ಮಹಿಳೆಯರ 4×400 ಮೀ ರಿಲೇ ತಂಡಗಳು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.
ಏಷ್ಯನ್ ಗೇಮ್ಸ್ 2023 ಕ್ಕೆ ಮುಂಚಿತವಾಗಿ, ಭಾರತವು 100 ಪದಕಗಳ ಗುರಿಯನ್ನು ಹೊಂದಿತ್ತು ಮತ್ತು ಅದು ಈಗ ನಿಜವಾಗುವ ಸಾಧ್ಯತೆ ತೋರುತ್ತಿದೆ. ಏಷ್ಯನ್ ಗೇಮ್ಸ್‌ನಲ್ಲಿ ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. 1951ರಲ್ಲಿ ಏಷ್ಯನ್ ಗೇಮ್ಸ್ ಆರಂಭವಾದಾಗಿನಿಂದ ಭಾರತಕ್ಕೆ 70 ಪದಕಗಳ ಗಡಿ ದಾಟಲು ಸಾಧ್ಯವಾಗಿರಲಿಲ್ಲ.
ಪುರುಷರ ಹಾಕಿ ಫೈನಲ್ ಗೆ
ಭಾರತ 5-3 ರಿಂದ ದಕ್ಷಿಣ ಕೊರಿಯಾವನ್ನು ಸೋಲಿಸಿ ಪುರುಷರ ಹಾಕಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದೆ. ಚಿನ್ನದ ಪದಕಕ್ಕಾಗಿ ಜಪಾನ್ ವಿರುದ್ಧ ಸೆಣಸಾಡಬೇಕಾಗಿದೆ. 2024 ರ ಒಲಂಪಿಕ್ಸ್‌ಗೆ ಸ್ಥಾನ ಖಚಿತ ಪಡಿಸಿಕೊಂಡಿದ್ದಾರೆ.