ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇಂದು ನಡೆದ ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು 5-1 ಅಂತರದಿಂದ ಗೆಲುವು ಸಾಧಿಸಿ ಸ್ವರ್ಣ ಪದಕ ಮುಡಿಗೇರಿಸಿಕೊಂಡಿದೆ.
2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 100 ಪದಕಗಳ ಗಡಿಯನ್ನು ತಲುಪುವುದು ಖಚಿತವಾಗಿದೆ. ಏಷ್ಯನ್ ಗೇಮ್ಸ್ ನಲ್ಲಿ ಭಾರತವು 100 ಪದಕಗಳ ಗಡಿ ದಾಟುತ್ತಿರುವುದು ಇದೇ ಮೊದಲು. ಭಾರತ ಈಗಾಗಲೇ 95 ಪದಕಗಳನ್ನು ಗೆದ್ದಿದ್ದು, ಉಳಿದ ಐದು ಪದಕಗಳು ಖಚಿತವಾಗಿವೆ.
ಜಪಾನ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಹಿಡಿತ ಸಾಧಿಸಿತ್ತು. ಮನ್ ಪ್ರೀತ್ ಸಿಂಗ್ ಅವರು ಮೊದಲ ಗೋಲು ಹೊಡೆದು ಭಾರತದ ಪರ ಶುಭಾರಂಭ ಮಾಡಿದರು. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಸಿಂಗ್ ಮತ್ತು 36ನೇ ನಿಮಿಷದಲ್ಲಿ ರೋಹಿತ್ ದಾಸ್ ಗೋಲು ಹೊಡೆದರು.
ಜಪಾನ್ ಪರ ಸೆರೆನ್ ತನಕಾ ಮೊದಲ ಗೋಲು ಬಾರಿಸಿದರು. ಕೊನೆಯ ಕ್ಷಣದಲ್ಲಿ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರು ಗೋಲು ಬಾರಿಸಿದರು. ಈ ಮೂಲಕ ಭಾರತ 5-1 ಅಂತರದಿಂದ ಅಧಿಕಾರಯುತ ಜಯ ಸಾಧಿಸಿತು. ಇದರೊಂದಿಗೆ ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಿತು.
ಭಾರತ ಸದ್ಯ 22 ಬಂಗಾರ, 34 ಬೆಳ್ಳಿ ಮತ್ತು 39 ಕಂಚು ಪದಕಗಳೊಂದಿಗೆ ಒಟ್ಟು 95 ಪದಕಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.