ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ನ ಕ್ರಿಕೆಟ್ ಕೂಟದ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಗಳಿಸಿದೆ. ನೇಪಾಳ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ತಂಡವು 23 ರನ್ ಅಂತರದ ಗೆಲುವು ಸಾಧಿಸಿದೆ.
ಪಿಂಗ್ ಫೆಂಗ್ ಕ್ಯಾಂಪಸ್ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಾಲ್ಕು ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದರೆ, ನೇಪಾಳವು 9 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಮೊದಲ ವಿಕೆಟ್ ಗೆ ನೂರು ರನ್ ಜೊತೆಯಾಟವಾಡಿದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಜೈಸ್ವಾಲ್ ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿದರು. ಎಂಟು ಫೋರ್ ಮತ್ತು ಏಳು ಸಿಕ್ಸರ್ ಬಾರಿದರು.
ಉಳಿದಂತೆ ರಿಂಕು ಸಿಂಗ್ 15 ಎಸೆತಗಳಲ್ಲಿ 37 ರನ್, ಶಿವಂ ದುಬೆ 25 ರನ್ ಮತ್ತು ಗಾಯಕ್ವಾಡ್ 25 ರನ್ ಗಳಿಸಿದರು. ನೇಪಾಳ ಪರ ದೀಪೆಂದ್ರ ಸಿಂಗ್ ಎರಡು ವಿಕೆಟ್, ಸೋಂಪಾಲ್ ಮತ್ತು ಲಮಿಚೇನ್ ತಲಾ ಒಂದು ವಿಕೆಟ್ ಪಡೆದರು.
ಬ್ಯಾಟಿಂಗ್ ಆರಂಭಿಸಿದ ನೇಪಾಳ ಪರ ಹಲವರು ಆರಂಭ ಪಡೆದರೂ ದೊಡ್ಡ ಇನ್ನಿಂಗ್ಸ್ ಆಡಲಿಲ್ಲ. ಕುಶಾಲ್ ಭುರ್ತೆಲ್ 28 ರನ್, ದೀಪೆಂದ್ರ ಸಿಂಗ್ ಐರಿ 32 ರನ್, ಕುಶಾಲ್ ಮಲ್ಲ ಮತ್ತು ಸಂದೀಪ್ ಜೋರಾ ತಲಾ 29 ರನ್ ಗಳಿಸಿದರು.
ಭಾರತದ ಪರ ರವಿ ಬಿಷ್ಣೋಯಿ ಮತ್ತು ಆವೇಶ್ ಖಾನ್ ತಲಾ ಮೂರು ವಿಕೆಟ್ ಪಡೆದರೆ, ಅರ್ಶದೀಪ್ ಎರಡು, ಸಾಯಿ ಕಿಶೋರ್ ಒಂದು ವಿಕೆಟ್ ಕಿತ್ತರು.