ಜಕಾರ್ತಾ: ಭಾರತದಲ್ಲಿ ಕ್ರೀಡಾಪಟುಗಳು ಪದಕ ಗೆಲ್ಲುವುದಿಲ್ಲವೆಂದು ಆರೋಪಿಸಲಾಗುತ್ತದೆ. ಆದರೆ ಅವರಿಗಿರುವ ಸಮಸ್ಯೆಗಳ ಬಗ್ಗೆ ಬಹುತೇಕರು ತಲೆಕೆಡಿಸಿಕೊಳ್ಳುವುದಿಲ್ಲ. ಬಂಗಾಳದಲ್ಲಿರುವ ಸ್ವಪ್ನಾ ಬರ್ಮನ್ ಎಂಬ ಈ ಪ್ರತಿಭಾವಂತ ಹೆಪಾrತ್ಲಾನ್ ಸ್ಪರ್ಧಿಗೆ ಕಾಲಿನಲ್ಲಿ ಆರು ಬೆರಳುಗಳಿವೆ. ಆದ್ದರಿಂದ ಆಕೆಯ ಪಾದಗಳು ಬಹಳ ಅಗಲ. ಆಕೆಗೆ ಸರಿಹೊಂದುವಂತಹ ಕ್ರೀಡಾ ಶೂಗಳು ಇಡೀ ಭಾರತದಲ್ಲೇ ಸಿಗುತ್ತಿಲ್ಲ! ಈಗ ಆಕೆ ತನ್ನಲ್ಲಿರುವ ಹಳೇ ಶೂಗಳೊಂದಿಗೆ ಏಶ್ಯಾಡ್‌ನಲ್ಲಿ ಸ್ಪರ್ಧಿಸಬೇಕಿದೆ.
ಆಕೆಯ ಸ್ಪರ್ಧೆಗಳು ಆ. 28ರಿಂದ ಶುರುವಾಗಲಿವೆ. ಅದಕ್ಕೂ ಮುನ್ನ ಆಕೆಗೆ ಶೂಗಳನ್ನು ಹೊಂದಿಸಿಕೊಳ್ಳುವುದು ಹೇಗೆ ಎಂಬುದೇ ಚಿಂತೆ. ತನ್ನ ಕಾಲಿಗೆ ತಕ್ಕಂತೆ ರೂಪುಗೊಳಿಸಿದ ಶೂಗಳು ತನಗೆ ಯಾವತ್ತೂ ಸಿಗಲಿಲ್ಲ. ಅದರ ಬದಲಿಗೆ ಒಂದು ಮಾಡೆಲ್‌ನ ಶೂಗಳನ್ನು ಬಳಸಲು ಆರಂಭಿಸಿದ್ದೆ. ಆದರೆ ಈಗ ಅಂತಹ ಶೂಗಳೇ ಭಾರತದಲ್ಲಿ ಸಿಗುವುದಿಲ್ಲ ಎಂದು ಬರ್ಮನ್ ಹೇಳುತ್ತಾರೆ.
ಇನ್ನು ಬೇರೆ ಬ್ರ್ಯಾಂಡ್‌ಗಳನ್ನು ಆಕೆ ಪ್ರಯತ್ನಿಸಿದ್ದಾರೆ. ಆದರೆ ಅವು ಯಾವುವೂ ಆಕೆಯ ಕಾಲಿಗೆ ಹೊಂದುತ್ತಿಲ್ಲ. ಹೇಗೋ ಹಾಕಿಕೊಂಡರೆ ಅಸಾಧ್ಯವಾದ ಕಾಲುನೋವು. ಆ 6ನೇ ಬೆರಳನ್ನು ಎರಡೂ ಕಾಲಿನಿಂದ ತೆಗೆಸಿ ಬಿಡು ಎಂದು ಹಲವರು ಸ್ವಪ್ನಾಗೆ ಸಲಹೆ ನೀಡಿದ್ದಾರೆ. ಅದನ್ನು ಆಕೆ ಗಂಭೀರವಾಗಿ ಪರಿಗಣಿಸಿಲ್ಲ. ಅದು ಹೇಗೋ ತಾನು ನಿಭಾಯಿಸಿ ಕೊಳ್ಳುತ್ತೇನೆ. ಸದ್ಯ ತನ್ನ ಗಮನ ಕ್ರೀಡಾಕೂಟದ ಮೇಲಿದೆ. ಉಳಿದಿ ದ್ದನ್ನು ಮರೆತುಬಿಟ್ಟು ಫಲಿತಾಂಶದ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ ಎಂದು ಹೇಳಿಕೊಳ್ಳುತ್ತಾರೆ.
ಹೆಪ್ಟಾತ್ಲಾನ್ ಅಂದರೆ ಏನು?: ಹೆಪ್ಟಾತ್ಲಾನ್ ಎಂದರೆ 7 ಬೇರೆ ಬೇರೆ ರೀತಿಯ ಕ್ರೀಡೆಗಳನ್ನೊಳಗೊಂಡ ಸ್ಪರ್ಧೆ. ಇದು ಪುರುಷರಿಗೆ ಮತ್ತು ಮಹಿಳೆಯರಿಗೆ ಬೇರೆ ಬೇರೆ ಇರುತ್ತದೆ. ಮಹಿಳೆಯರ ಸ್ಪರ್ಧೆಯಲ್ಲಿ 100 ಮೀ. ಹರ್ಡಲ್ಸ್, ಎತ್ತರ ಜಿಗಿತ, ಶಾಟ್‌ಪುಟ್ ಎಸೆತ, 200 ಮೀ. ಓಟ, ಉದ್ದಜಿಗಿತ, ಜಾವೆಲಿನ್ ಎಸೆತ, 800 ಮೀ. ಓಟವಿರುತ್ತದೆ.