ಹ್ಯಾಂಗ್ ಝೂ: ಪ್ರತಿಷ್ಠಿತ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೊದಲ ದಿನವೇ ಭಾರತದ ಕ್ರೀಡಾಪಟುಗಳು ಪದಕ ಬೇಟೆ ಆರಂಭಿಸಿದ್ದಾರೆ. ಅಧಿಕೃತ ಆರಂಭಿಕ ದಿನವಾದ ರವಿವಾರ ಐದು ಪದಕಗಳು ಭಾರತಕ್ಕೆ ಒಲಿದಿವೆ. ಮೂರು ಬೆಳ್ಳಿ ಮತ್ತು ಒಂದು ಕಂಚು ಭಾರತದ ಪಾಲಾಗಿದೆ.
ಮಹಿಳೆಯರ 10 ಮೀ ಏರ್ ರೈಫಲ್ ತಂಡ ವಿಭಾಗ, ಪುರುಷರ ಲೈಟ್ ವೈಟ್ ಡಬಲ್ ಸ್ಕಲ್ಸ್ ವಿಭಾಗ ಮತ್ತು ಪುರುಷರ ಎಂಟು ಜೋಡಿ ರೋವಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದರೆ, ಪುರುಷರ ಜೋಡಿ ರೋವಿಂಗ್ ಮತ್ತು ಮಹಿಳಾ 10 ಮೀ ಏರ್ ರೈಫಲ್ ನಲ್ಲಿ ಕಂಚಿನ ಪದಕ ಒಲಿದಿದೆ.
ಕೂಟದ ಮೊದಲ ಪದಕವನ್ನು ಮಹಿಳಾ ತಂಡವು ಗೆದ್ದಿರುವುದು ವಿಶೇಷ. ರಮಿತಾ, ಆಶಿ ಚೌಕ್ಸೆ ಮತ್ತು ಮೆಹುಲಿ ಘೋಷ್ ಅವರನ್ನೊಳಗೊಂಡ 10 ಮೀ ಏರ್ ರೈಫಲ್ ತಂಡ ರಜತ ಪದಕ ಗೆದ್ದು ಪದಕ ಪಟ್ಟಿಯಲ್ಲಿ ಭಾರತದ ಹೆಸರು ಮೂಡುವಂತೆ ಮಾಡಿದರು.
ಪುರುಷರ ಲೈಟ್ ವೈಟ್ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಭಾರತದ ಅರವಿಂದ ಸಿಂಗ್ ಮತ್ತು ಅರ್ಜುನ್ ಜಟ್ ಲಾಲ್ ಬೆಳ್ಳಿ ಪದಕ ಗೆದ್ದರು. ಪುರುಷರ ಜೋಡಿ ರೋವಿಂಗ್ ನಲ್ಲಿ ಬಾಬು ಲಾಲ್ ಯಾದವ್ ಮತ್ತು ಲೇಖ್ ರಾಮ್ ಜೋಡಿ ಕಂಚಿನ ಪದಕ ಗೆದ್ದರು. ಮಹಿಳಾ 10 ಮೀ ಏರ್ ರೈಫಲ್ ವಿಭಾಗದಲ್ಲಿ ಭಾರತದ ರಮಿತಾ ಕಂಚಿನ ಪದಕಕ್ಕೆ ಗುರಿಯಿಟ್ಟರು.
ಉಳಿದಂತೆ ಕ್ರಿಕೆಟ್ ನಲ್ಲಿ ಮಹಿಳಾ ತಂಡ ಫೈನಲ್ ಗೆ ಪ್ರವೇಶ ಪಡೆದಿದೆ. ಪುರುಷರ ಹಾಕಿಯಲ್ಲಿ ಉಜ್ಬೇಕಿಸ್ಥಾನವನ್ನು 16-0 ಅಂತರದಿಂದ ಸೋಲಿಸಿದ ಭಾರತ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಈಜು ವಿಭಾಗದಲ್ಲಿ ಶ್ರೀಹರಿ ನಟರಾಜ್ ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್ ಹೀಟ್ಸ್‌ನಲ್ಲಿ ಐದನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದರು. ಭಾರತದ ಮಹಿಳೆಯರ 4×100 ಮೀ ಫ್ರೀಸ್ಟೈಲ್ ರಿಲೇ ತಂಡ ಫೈನಲ್ ತಲುಪಿದೆ.