Advertisement

ರಾಹಿ ಚಿನ್ನದ ತುರಾಯಿ

06:00 AM Aug 23, 2018 | |

ಪಾಲೆಂಬಾಂಗ್‌: ಭಾರತ ಏಶ್ಯಾಡ್‌ ಶೂಟಿಂಗ್‌ನಲ್ಲಿ ಬಂಗಾರದ ಬೇಟೆ ಮುಂದುವರಿಸಿದೆ. ಬುಧವಾರ ನಡೆದ ವನಿತೆಯರ 25 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ರಾಹಿ ಸರನೋಬತ್‌ ಬಂಗಾರಕ್ಕೆ ಗುರಿ ಇರಿಸುವ ಮೂಲಕ ಇತಿಹಾಸವೊಂದನ್ನು ಬರೆದರು. ಏಶ್ಯಾಡ್‌ ಚಿನ್ನ ಗೆದ್ದ ಭಾರತದ ಮೊದಲ ವನಿತಾ ಶೂಟರ್‌ ಎಂಬ ದಾಖಲೆಗೆ ಪಾತ್ರರಾದರು. ಆದರೆ ಇದೇ ವಿಭಾಗದಲ್ಲಿ ಸ್ಪರ್ಧೆಗಿಳಿದಿದ್ದ ಭರವಸೆಯ ಶೂಟರ್‌ ಮನು ಭಾಕರ್‌ 6ನೇ ಸ್ಥಾನಕ್ಕೆ ಕುಸಿದು ನಿರಾಸೆ ಮೂಡಿಸಿದರು.

Advertisement

ಶೂಟೌಟ್‌ನಲ್ಲಿ ಚಿನ್ನ ನಿರ್ಧಾರ
27ರ ಹರೆಯದ ಕೊಲ್ಲಾಪುರ ಮೂಲದ ರಾಹಿ ಸರನೋಬತ್‌ಗೆ ಫೈನಲ್‌ನಲ್ಲಿ ಥಾಯ್ಲೆಂಡಿನ ನಫ‌ಸ್ವನ್‌ ಯಾಂಗ್‌ಪೈಬೂನ್‌ ಅವರಿಂದ ಕಠಿನ ಸ್ಪರ್ಧೆ ಎದುರಾಯಿತು. ಕೊನೆಗೆ 2 ಶೂಟೌಟ್‌ ಮೂಲಕ ಬಂಗಾರವನ್ನು ಇತ್ಯರ್ಥಗೊಳಿಸಲಾಯಿತು. ತೀವ್ರ ಕುತೂಹಲ ಕೆರಳಿಸಿದ 5 ಶಾಟ್‌ಗಳ 10 ಸೀರೀಸ್‌ ಫೈನಲ್‌ನಲ್ಲಿ ರಾಹಿ ಮತ್ತು ಯಾಂಗ್‌ಪೈಬೂನ್‌ ತಲಾ 34 ಅಂಕ ಸಂಪಾದಿಸಿ ಮೊದಲಿಗರಾಗಿ ಮೂಡಿಬಂದರು. ಹೀಗಾಗಿ ಶೂಟೌಟ್‌ ಅನಿವಾರ್ಯವಾಯಿತು. ಇಲ್ಲಿಯೂ ಸ್ಪರ್ಧೆ ತೀವ್ರವಾಗಿತ್ತು. ಮೊದಲ ಶೂಟ್‌ ಆಫ್ನಲ್ಲಿ ಇಬ್ಬರೂ ತಲಾ 4ಕ್ಕೆ ಗುರಿ ಇರಿಸಿ ಮತ್ತೆ ಸಮಬಲ ಸಾಧಿಸಿದರು. ಆದರೆ ದ್ವಿತೀಯ ಶೂಟ್‌ ಆಫ್ನಲ್ಲಿ ರಾಹಿ 3, ಯಾಂಗ್‌ಪೈಬೂನ್‌ 2ಕ್ಕೆ ಗುರಿ ಇರಿಸಿದರು. ಐತಿಹಾಸಿಕ ಚಿನ್ನ ರಾಹಿ ಸರನೋಬತ್‌ ಕೊರಳನ್ನು ಅಲಂಕರಿಸಿತು. ಕಂಚಿನ ಪದಕ ದಕ್ಷಿಣ ಕೊರಿಯಾದ ಕಿಮ್‌ ಮಿನ್‌ಜುಂಗ್‌ ಪಾಲಾಯಿತು.

ಫೈನಲ್‌ ಸ್ಪರ್ಧೆಯ ಆರಂಭಿಕ ಹಂತಗಳಲ್ಲಿ ರಾಹಿಯೇ ಮುನ್ನಡೆಯಲ್ಲಿದ್ದರು. 6ನೇ ಸುತ್ತಿನಲ್ಲಿ ಐದಕ್ಕೆ 5 ಅಂಕ ಗಳಿಸಿ ಬಂಗಾರದತ್ತ ಮುನ್ನುಗ್ಗಿದರು. ಆದರೆ ಈ ಹಂತದಲ್ಲಿ ಥಾಯ್‌ ಸ್ಪರ್ಧಿ ಮೇಲುಗೈ ಸಾಧಿಸುತ್ತ ಬಂದರು. ಸ್ಪರ್ಧೆ ತೀವ್ರಗೊಂಡಿತು. ಕೊನೆಯಲ್ಲಿ ಇಬ್ಬರೂ ಸಮಾನ ಅಂಕ ಸಂಪಾದಿಸಿ ರೋಚಕ ಹೋರಾಟಕ್ಕೆ ಸಾಕ್ಷಿಯಾದರು. ಇಬ್ಬರೂ 34 ಅಂಕ ಸಂಪಾದಿಸುವ ಮೂಲಕ ಏಶ್ಯನ್‌ ಗೇಮ್ಸ್‌ ಜಂಟಿ ದಾಖಲೆ ಸ್ಥಾಪಿಸಿದರು.

ಇದು ಜಕಾರ್ತಾ ಏಶ್ಯಾಡ್‌ನ‌ಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ಒಲಿದ 2ನೇ ಸ್ವರ್ಣ ಪದಕ. ಮಂಗಳವಾರ ಪುರುಷರ 10 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ 16ರ ಹರೆಯದ ಸೌರಭ್‌ ಚೌಧರಿ ಚಿನ್ನ ಜಯಿಸಿದ್ದರು. ಒಟ್ಟಾರೆಯಾಗಿ ಏಶ್ಯಾಡ್‌ ಶೂಟಿಂಗ್‌ನಲ್ಲಿ ಭಾರತದ ಪಾಲಾದ 6ನೇ ಚಿನ್ನದ ಪದಕ ಇದಾಗಿದೆ. ಉಳಿದ ಸಾಧಕರೆಂದರೆ ಜಸ್ಪಾಲ್‌ ರಾಣ, ರಣಧೀರ್‌ ಸಿಂಗ್‌, ಜಿತು ರಾಯ್‌ ಮತ್ತು ರಂಜನ್‌ ಸೋಧಿ.

ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲೂ (2013) ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿತ್ತ ವನಿತಾ ಶೂಟರ್‌ ಎಂಬ ಖ್ಯಾತಿಯ ರಾಹಿ, 2010ರ ದಿಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಅವಳಿ ಚಿನ್ನ, 2014ರ ಏಶ್ಯಾಡ್‌ನ‌ಲ್ಲಿ ಕಂಚಿನ ಪದಕ ಜಯಿಸಿದ ಸಾಧಕಿಯೂ ಹೌದು.

Advertisement

ಟೆಕ್ನಿಕ್‌ನಲ್ಲಿ ಬದಲಾವಣೆ
ಕಳೆದ ವರ್ಷ ರಾಹಿ ಮಣಿ ಗಂಟಿನ ಗಂಭೀರ ಸಮಸ್ಯೆಯಿಂದ ನರಳಿದ್ದರು. ಹೀಗಾಗಿ ಅವರು ತಮ್ಮ ಶೂಟಿಂಗ್‌ ಟೆಕ್ನಿಕ್‌ನಲ್ಲಿ ಬದಲಾವಣೆ ಮಾಡಿಕೊಳ್ಳು ವುದು ಅನಿವಾರ್ಯವಾಯಿತು. ಈ ಸಂದರ್ಭ 2 ಬಾರಿಯ ವಿಶ್ವ ಚಾಂಪಿಯನ್‌, ಒಲಿಂಪಿಕ್‌ ಪದಕ ವಿಜೇತ ಜರ್ಮನಿಯ ಎಂ. ದೋರ್ಜ್‌ ಸುರೆನ್‌ ಅವರಿಂದ ಕೋಚಿಂಗ್‌ ಪಡೆದು ಏಶ್ಯಾಡ್‌ಗೆ ಅಣಿಯಾದರು. ಇತಿಹಾಸವೀಗ ಕಣ್ಮುಂದಿದೆ. ಇದೇ ವೇಳೆ ವನಿತೆಯರ ರೈಫ‌ಲ್‌ 3 ಪೊಸಿಶನ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ಅಂಜುಮ್‌ ಮೌದ್ಗಿಲ್‌ ಮತ್ತು ಗಾಯತ್ರಿ ನಿತ್ಯಾನಂದಮ್‌ ಫೈನಲ್‌ ತಲುಪುವಲ್ಲಿ ವಿಫ‌ಲರಾದರು.

ತಂತ್ರಗಾರಿಕೆಯಲ್ಲಿ ಬದಲಾವಣೆ
ರಾಹಿಯ ತಂತ್ರಗಾರಿಕೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬೇಕಾಯಿತು. ಅಲ್ಲದೆ ಆಕೆಯನ್ನು ಮಾನಸಿಕವಾಗಿ ಬಲಿಷ್ಠಗೊಳಿಸಬೇಕಾಗಿತ್ತು. ಆಕೆಯನ್ನು ಮತ್ತಷ್ಟು ಹರಿತಗೊಳಿಸುವುದು ನನ್ನ ಕೆಲಸವಾಗಿತ್ತು.
ಎಂ.ದೋರ್ಜ್‌ಸುರೆನ್‌

Advertisement

Udayavani is now on Telegram. Click here to join our channel and stay updated with the latest news.

Next