Advertisement

ಚಿನ್ನದ ಕುವರ: ನೀರಜ್‌ ಚೋಪ್ರಾ

06:00 AM Aug 28, 2018 | Team Udayavani |

ಜಕಾರ್ತಾ: ಭಾರತದ ಯುವ ಜಾವೆಲಿನ್‌ ಎಸೆತಗಾರ, 20ರ ಹರೆಯದ ನೀರಜ್‌ ಚೋಪ್ರಾ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ತಮ್ಮ ಗೆಲುವಿನ ಓಟವನ್ನು ಏಶ್ಯಾಡ್‌ನ‌ಲ್ಲೂ ಮುಂದುವರಿಸಿದ ಅವರು ಬಂಗಾರದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಸೋಮವಾರ ನಡೆದ ಫೈನಲ್‌ನಲ್ಲಿ ಗರಿಷ್ಠ 88.06 ಮೀ. ದೂರದ ಜೀವನಶ್ರೇಷ್ಠ ಸಾಧನೆಯೊಂದಿಗೆ ನೀರಜ್‌ ಮೆರೆದಾಡಿದರು.

Advertisement

ಇದು ಏಶ್ಯನ್‌ ಗೇಮ್ಸ್‌ ಜಾವೆಲಿನ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕ. ಹಾಗೆಯೇ ಏಶ್ಯಾಡ್‌ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಲಭಿಸಿದ ಕೇವಲ 2ನೇ ಪದಕವೂ ಆಗಿದೆ. ಇದಕ್ಕೂ ಮುನ್ನ 1982ರ ಹೊಸದಿಲ್ಲಿ ಏಶ್ಯಾಡ್‌ನ‌ಲ್ಲಿ ಗುರುತೇಜ್‌ ಸಿಂಗ್‌ ಕಂಚಿನ ಪದಕ ಜಯಿಸಿದ್ದರು.

ಒಟ್ಟು 6 ಸುತ್ತುಗಳ ಸ್ಪರ್ಧೆಯ 3ನೇ ಸುತ್ತಿನಲ್ಲಿ ನೀರಜ್‌ 88.06 ಮೀ. ದೂರ ಎಸೆದು ಬಂಗಾರಕ್ಕೆ ಮುತ್ತಿಕ್ಕಿದರು. ಮೊದಲ ಪ್ರಯತ್ನದಲ್ಲಿ 83.46 ಮೀ., 4ನೇ ಪ್ರಯತ್ನದಲ್ಲಿ 83.25 ಮೀ. ಹಾಗೂ 5ನೇ ಪ್ರಯತ್ನದಲ್ಲಿ 86.36 ಮೀ. ದೂರಕ್ಕೆ ಜಾವೆಲಿನ್‌ ಎಸೆದರು. ಅವರ 2ನೇ ಹಾಗೂ 6ನೇ ಪ್ರಯತ್ನ “ಫೌಲ್‌’ ಆಯಿತು. ಚೀನದ ಲಿಯು ಕ್ವಿಜೆನ್‌ ಬೆಳ್ಳಿ ಪದಕ (82.22 ಮೀ.) ಹಾಗೂ ಪಾಕಿಸ್ಥಾನದ ಅರ್ಷದ್‌ ನದೀಮ್‌ ಕಂಚಿನ ಪದಕ (80.75 ಮೀ.) ಗೆದ್ದರು. 

ಜೀವನಶ್ರೇಷ್ಠ ಸಾಧನೆ
ಇದು ನೀರಜ್‌ ಚೋಪ್ರಾ ಅವರ ಅತ್ಯುತ್ತಮ ಸಾಧನೆಯಾಗಿದೆ. ಇದಕ್ಕೂ ಮುನ್ನ ದೋಹಾ ಕೂಟದಲ್ಲಿ 87.43 ಮೀ. ದೂರ ಎಸೆದು ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಇದು ವಿಶ್ವ ಮಟ್ಟದಲ್ಲಿ ನೀರಜ್‌ ಚೋಪ್ರಾ ಪಾಲಾದ 5ನೇ ಚಿನ್ನದ ಪದಕ. ಇದಕ್ಕೂ ಮುನ್ನ ಅವರು 2016ರ ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌, 2017ರ ಏಶ್ಯನ್‌ ಚಾಂಪಿಯನ್‌ಶಿಪ್‌, 2016ರ ಸೌತ್‌ ಏಶ್ಯನ್‌ ಗೇಮ್ಸ್‌ ಹಾಗೂ ಕಳೆದ ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲೂ ಬಂಗಾರದಿಂದ ಸಿಂಗಾರಗೊಂಡಿದ್ದರು.

ಈ ಸ್ಪರ್ಧೆಯಲ್ಲಿ ಚೈನೀಸ್‌ ತೈಪೆಯ ಚಾವೊ ಸುನ್‌ ಚೆಂಗ್‌ ಭಾರತೀಯನಿಗೆ ಪ್ರಬಲ ಸ್ಪರ್ಧೆ ಒಡ್ಡಬಹುದೆಂಬ ನಿರೀಕ್ಷೆ ಇತ್ತು. ಕಳೆದ ವರ್ಷ ಅವರು 91.36 ಮೀ. ದೂರ ಎಸೆದು ದಾಖಲೆ ನಿರ್ಮಿಸಿದ್ದರು. ಆದರೆ ಇಲ್ಲಿ ಅವರು ಕೇವಲ 79.81 ಮೀ. ದೂರ ಎಸೆದು 5ನೇ ಸ್ಥಾನಕ್ಕೆ ಕುಸಿದರು.
ಹರ್ಯಾಣದ ಪಾಣಿಪತ್‌ನ ಖಂದ್ರಾ ಗ್ರಾಮದ ಈ ಜಾವೆಲಿನ್‌ ತ್ರೋವರ್‌ ಸಾಧನೆಗೆ ಭಾರತವೇ ಹೆಮ್ಮೆಪಡುತ್ತಿದೆ.

Advertisement

ಸಾಧನೆಗೆ ಕೊನೆ ಇಲ್ಲ!
ವಿಶ್ವ ಜೂನಿಯರ್‌ ಮಟ್ಟದಲ್ಲೂ ದಾಖಲೆ ಹೊಂದಿರುವ ನೀರಜ್‌ ಚೋಪ್ರಾ (86.48 ಮೀ.) ಪ್ರಸಕ್ತ ಋತುವಿನಲ್ಲಿ ಪ್ರಚಂಡ ಫಾರ್ಮ್ನೊಂದಿಗೆ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರದಲ್ಲಿ ಹಾರಿಸುತ್ತಿದ್ದಾರೆ. ಕಳೆದ ಮಾರ್ಚ್‌ನಲ್ಲಿ 85.94 ಮೀ. ದೂರದ ಸಾಧನೆ ದಾಖಲಿಸಿ ಫೆಡರೇಶನ್‌ ಕಪ್‌ ಜಯಿಸಿದ್ದ ನೀರಜ್‌, ದೋಹಾದಲ್ಲಿ 87.43 ಮೀ., ಗೋಲ್ಡ್‌ಕೋಸ್ಟ್‌ ಗೇಮ್ಸ್‌ನಲ್ಲಿ 86.47 ಮೀ., ಫ್ರಾನ್ಸ್‌ ಮತ್ತು ಫಿನ್‌ಲ್ಯಾಂಡ್ ನ‌ಲ್ಲಿ ಕ್ರಮವಾಗಿ 85.17 ಮೀ. ಹಾಗೂ 85.69 ಮೀ. ದೂರದ ಸಾಧನೆಗೈದಿದ್ದರು. ಅರ್ಥಾತ್‌, ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ನೀರಜ್‌ ಚೋಪ್ರಾ ಈವರೆಗೆ ವೈಫ‌ಲ್ಯ ಕಂಡದ್ದೇ ಇಲ್ಲ. ಎಲ್ಲದರಲ್ಲೂ ಚಿನ್ನ ಗೆದ್ದು ವಿಜೃಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next