ಕೊಲಂಬೊ: ಏಷ್ಯಾ ಕಪ್ ಕೂಟದ ಕೊನೆಯ ಸೂಪರ್ ಫೋರ್ ಪಂದ್ಯವನ್ನಿಂದು ಭಾರತ ಆಡುತ್ತಿದೆ. ಈಗಾಗಲೇ ಫೈನಲ್ ರೇಸ್ ನಿಂದ ಹೊರಬಿದ್ದಿರುವ ಬಾಂಗ್ಲಾದೇಶ ತಂಡ ಎದುರಾಗಿದೆ. ಇದೇ ವೇಳೆ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಏಕದಿನ ಕ್ರಿಕೆಟ್ ನಲ್ಲಿ 200 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ಜಡೇಜಾ ತಮ್ಮ 175ನೇ ಇನ್ನಿಂಗ್ಸ್ ನಲ್ಲಿ ಈ ಹೆಗ್ಗುರುತನ್ನು ತಲುಪಿದರು. ಏಕದಿನ ಮಾದರಿಯಲ್ಲಿ 200 ವಿಕೆಟ್‌ಗಳನ್ನು ಪಡೆದ ಏಳನೇ ಭಾರತೀಯ ಮತ್ತು ಏಕೈಕ ಎಡಗೈ ಸ್ಪಿನ್ನರ್ ಎನಿಸಿಕೊಂಡರು.
ಏಕದಿನ ಕ್ರಿಕೆಟ್ ನಲ್ಲಿ 200ಕ್ಕಿಂತ ಹೆಚ್ಚು ವಿಕೆಟ್ ಪಡೆದ ಇತರ ಭಾರತೀಯರೆಂದರೆ ಅನಿಲ್ ಕುಂಬ್ಳೆ (334 ವಿಕೆಟ್), ಜಾವಗಲ್ ಶ್ರೀನಾಥ್ (315 ವಿಕೆಟ್), ಅಜಿತ್ ಅಗರ್ಕರ್ (288 ವಿಕೆಟ್), ಜಹೀರ್ ಖಾನ್ (269 ವಿಕೆಟ್), ಹರ್ಭಜನ್ ಸಿಂಗ್ (265 ವಿಕೆಟ್) ಮತ್ತು ಕಪಿಲ್ ದೇವ್ (253 ವಿಕೆಟ್).
ಜಡೇಜಾ ಅವರು ಹರ್ಭಜನ್ ಮತ್ತು ಕುಂಬ್ಳೆ ನಂತರ 200 ವಿಕೆಟ್‌ಗಳ ಹೆಗ್ಗುರುತನ್ನು ತಲುಪಿದ ಮೂರನೇ ಭಾರತೀಯ ಸ್ಪಿನ್ನರ್ ಎನಿಸಿಕೊಂಡರು. ಇದಲ್ಲದೆ, ಏಕದಿನ ಮಾದರಿಯಲ್ಲಿ 2000 ಪ್ಲಸ್ ರನ್ ಮತ್ತು 200 ಪ್ಲಸ್ ವಿಕೆಟ್ ಪಡೆದ ಸಾಧನೆ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗನಾದರು. ಮೊದಲನೆಯವರು ಮಾಜಿ ನಾಯಕ ಕಪಿಲ್ ದೇವ್.