Advertisement

Asian Champions Trophy Hockey: ಭಾರತ ಎದುರಾಳಿ; ಒತ್ತಡದಲ್ಲಿ ಪಾಕಿಸ್ಥಾನ

11:55 PM Aug 08, 2023 | Team Udayavani |

ಚೆನ್ನೈ: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಅಜೇಯ ಅಭಿಯಾನದೊಂದಿಗೆ ಸೆಮಿಫೈನಲ್‌ ಪ್ರವೇಶಿಸಿರುವ ಆತಿಥೇಯ ಭಾರತ ಬುಧವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ. ಭಾರತಕ್ಕೆ ಇದೊಂದು ಅಭ್ಯಾಸ ಪಂದ್ಯವಾದರೆ, ಪಾಕಿಸ್ಥಾನದ ಪಾಲಿಗೆ ತೀವ್ರ ಒತ್ತಡದ ಮುಖಾಮುಖಿ. ಸೆಮಿಫೈನಲ್‌ ಪ್ರವೇಶಿಸಬೇಕಾದರೆ ಅದು ಗೆಲ್ಲಲೇಬೇಕು!

Advertisement

3 ಗೆಲುವು ಹಾಗೂ ಒಂದು ಡ್ರಾ ಸಾಧನೆಯೊಂದಿಗೆ 10 ಅಂಕ ಗಳಿಸಿರುವ ಭಾರತ ಅಗ್ರಸ್ಥಾನ ಅಲಂಕರಿಸಿದೆ. ಮಲೇಷ್ಯಾ ದ್ವಿತೀಯ ಸ್ಥಾನದಲ್ಲಿದೆ (9 ಅಂಕ). ದಕ್ಷಿಣ ಕೊರಿಯಾ (5 ಅಂಕ), ಪಾಕಿಸ್ಥಾನ (5 ಅಂಕ), ಜಪಾನ್‌ (2 ಅಂಕ) ಮತ್ತು ಚೀನ (1 ಅಂಕ) ಅನಂತರದ ಸ್ಥಾನದಲ್ಲಿವೆ.

ಪಾಕಿಸ್ಥಾನ ಈ ಪಂದ್ಯಾವಳಿಯಲ್ಲಿ ನಿರೀಕ್ಷೆಗೂ ಕೆಳಮಟ್ಟದ ಪ್ರದರ್ಶನ ನೀಡುತ್ತ ಬಂದಿದೆ. ಗೆದ್ದದ್ದು ಒಂದು ಪಂದ್ಯ ಮಾತ್ರ. ಉಳಿದಂತೆ 2 ಡ್ರಾ ಸಾಧಿಸಿದ್ದು, ಒಂದನ್ನು ಸೋತಿದೆ. ಪಾಕಿಸ್ಥಾನದ ಸೆಮಿಫೈನಲ್‌ ಭವಿಷ್ಯ ಭಾರತದ ಕೈಯಲ್ಲಿದೆ ಎಂಬುದು ಸದ್ಯದ ಸ್ಥಿತಿ.

ಅನ್ಯ ಪಂದ್ಯಗಳ ಫ‌ಲಿತಾಂಶ
ಈ ಪಂದ್ಯವನ್ನು ಗೆದ್ದರೆ ಪಾಕಿಸ್ಥಾನ 4ನೇ ಸ್ಥಾನಿಯಾಗಿ ಉಪಾಂತ್ಯ ಪ್ರವೇಶಿಸಲಿದೆ. ಸೋತರೆ ಬಹುತೇಕ ಹೊರಬೀಳಲಿದೆ. ಇಲ್ಲವೇ ಚೀನ-ಜಪಾನ್‌ ಪಂದ್ಯದ ಫ‌ಲಿತಾಂಶ ನಿರ್ಣಾಯಕವಾಗಲಿದೆ. ಇಲ್ಲಿ ಚೀನ ಗೆದ್ದರೆ ಅಥವಾ ಜಪಾನ್‌ ಅತೀ ಕಡಿಮೆ ಅಂತರದಿಂದ ಜಯಿಸಿದರಷ್ಟೇ ಪಾಕ್‌ ಮುನ್ನಡೆಯನ್ನು ನಿರೀಕ್ಷಿಸಬಹುದು. ಇದೇ ವೇಳೆ ಮಲೇಷ್ಯಾ ತಂಡ ದಕ್ಷಿಣ ಕೊರಿಯಾವನ್ನು ದೊಡ್ಡ ಅಂತರದಿಂದ ಸೋಲಿಸುವುದನ್ನೂ ಪಾಕಿಸ್ಥಾನ ಹಾರೈಸಬೇಕಿದೆ.

ಈ ಎಲ್ಲ ಲೆಕ್ಕಾಚಾರದಿಂದಾಗಿ ಪಾಕಿಸ್ಥಾನ ಪಡೆ ಭಾರೀ ಒತ್ತಡಕ್ಕೆ ಸಿಲುಕಿರುವುದರಲ್ಲಿ ಅನುಮಾನವೇ ಇಲ್ಲ. ಅದೂ ಅಲ್ಲದೇ ಆತಿಥೇಯ ಭಾರತವನ್ನು ಎದುರಿಸಬೇಕಾದುದು ಇದಕ್ಕಿಂತ ಮಿಗಿಲಾದ ಒತ್ತಡ ಎನ್ನಲಡ್ಡಿಯಿಲ್ಲ.

Advertisement

ಭಾರತವೇ ಫೇವರಿಟ್‌
ಭಾರತ ಮತ್ತು ಪಾಕಿಸ್ಥಾನ ಈವರೆಗೆ 3 ಸಲ ಏಷ್ಯನ್‌ ಚಾಂಪಿಯನ್‌ ಪಟ್ಟ ಅಲಂಕರಿಸಿವೆ. ಆದರೆ ಬುಧವಾರದ ಮುಖಾಮುಖಿಯಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಪಡೆಯೇ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ಭಾರತ ಈ ಕೂಟದಲ್ಲಿ ಆಕ್ರಮಣಕಾರಿ ಆಟವಾಡುತ್ತಲೇ ಬಂದಿದೆ. ಆದರೆ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿಸುವ ಪ್ರಯತ್ನ ಸಾಲದು. ಹಾಗೆಯೇ ಸಣ್ಣಪುಟ್ಟ ಕಾರಣಗಳಿಗೆ ಪೆನಾಲ್ಟಿ ಕಾರ್ನರ್‌ ನೀಡುವುದನ್ನೂ ನಿಲ್ಲಿಸಬೇಕಿದೆ.

ಈಗಿನ ಮಟ್ಟಿಗೆ ಹೇಳುವುದಾದರೆ, ಭಾರತ ತಂಡದ ಮೇಲೆ ಹೆಚ್ಚಿನ ಒತ್ತಡವಿಲ್ಲ. ಅದು ನಿರಾಳವಾಗಿ ಆಡಿ ಸೆಮಿಫೈನಲ್‌ಗೆ ರಿಹರ್ಸಲ್‌ ನಡೆಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next