ಬ್ಯಾಂಕಾಕ್: ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸತೀಶ್ ಕುಮಾರ್ (+91 ಕೆಜಿ), ಸೋನಿಯಾ ಚಹಲ್ (57 ಕೆಜಿ) “ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್’ ಕೂಟದ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಉಳಿದಂತೆ 3 ಬಾಕ್ಸರ್‌ಗಳು 16ರ ಹಂತಕ್ಕೆ ಕಾಲಿಟ್ಟಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಸತೀಶ್ ಇರಾನ್ ಇಮಾನ್ ರಮೇಜನ್ ಪುರ್ಡೆಲವರ್ ಅವರನ್ನು ಸೋಲಿಸುವ ಮೂಲಕ 8ರ ಹಂತಕ್ಕೆ ಪ್ರವೇಶಿಸಿದ್ದಾರೆ. ವನಿತಾ ವಿಭಾಗದಲ್ಲಿ ವಿಶ್ವ ಬೆಳ್ಳಿ ಪದಕ ವಿಚೇತೆ ಸೋನಿಯಾ ವಿಯೆಟ್ನಾಂ ಉಯಾನ್ ದೊ ನಹ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೂ ಮುನ್ನ ನಡೆದ ಪಂದ್ಯಗಳಲ್ಲಿ ರಾಷ್ಟ್ರೀಯ ಚಾಂಪಿಯನ್ ದೀಪಕ್ (49 ಕೆಜಿ), ರೋಹಿತ್ ಟಕಾಸ್ (64 ಕೆಜಿ) ಮತ್ತು ಆಶಿಶ್ (69 ಕೆಜಿ) ಪ್ರಿ-ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ದೀಪಕ್ ವಿಯೆಟ್ನಾಂ ಲೂಯಿ ಭುಯಿ ಕಾಂಗ್ ದಾನ್ ವಿರುದ್ಧದ ಪಂದ್ಯದಲ್ಲಿ ತೀರ್ಪುಗಾರರ ಒಮ್ಮತದ ನಿರ್ಧಾರದಿಂದ ಮುನ್ನಡೆದಿದ್ದಾರೆ. ರೋಹಿತ್ ಕೂಡ ತೀರ್ಪುಗಾರರ ಅವಿರೋಧ ಆಯ್ಕೆಯಿಂದ ತೈವಾನ್ ಚು-ಯೆನ್ ಲಾಯಿ ವಿರುದ್ಧ ಜಯಿಸಿದರು.
“ಇಲ್ಲಿ ಚಿನ್ನದ ಪದಕ ಪಡೆದ ಎಲ್ಲ ಕ್ರೀಡಾಪಟುಗಳು ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಥಾನ ಪಡೆಯುತ್ತಾರೆ’ ಎಂದು ಭಾರತದ ಬಾಕ್ಸಿಂಗ್ ಉನ್ನತ ಪ್ರದರ್ಶನ ನಿರ್ದೇಶಕ ಸ್ಯಾಂಟಿಯಾಗೊ ನಿಯೇವಾ ಹೇಳಿದ್ದಾರೆ.
ಈ ಕೂಟದಲ್ಲಿ 34 ದೇಶಗಳ 100 ವನಿತಾ, 198 ಪುರುಷ ಬಾಕ್ಸರ್‌ಗಳು ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ವನಿತಾ ವಿಭಾಗದಲ್ಲಿ ಪೂಜಾ ರಾಣಿ (81 ಕೆಜಿ) ಸೆಮಿಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಒಂದು ಪದಕ ಖಚಿತ ಪಡಿಸಿದ್ದಾರೆ.