Advertisement

Asian Athletics Championships 2023: ಶಾಟ್‌ಪುಟ್‌ ಸ್ವರ್ಣ ಉಳಿಸಿಕೊಂಡ ತೂರ್‌

11:08 PM Jul 14, 2023 | Team Udayavani |

ಬ್ಯಾಂಕಾಕ್‌: ಭಾರತದ ಶಾಟ್‌ಪುಟ್‌ ಕಿಂಗ್‌ ತಜಿಂದರ್‌ಪಾಲ್‌ ಸಿಂಗ್‌ ತೂರ್‌ ಏಷ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್‌ ಚೌಧರಿ ಮೊದಲ ಬಂಗಾರ ಗೆದ್ದರು. ಇದರೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 5ಕ್ಕೆ ಏರಿದೆ. ಜತೆಗೆ ಒಂದು ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನೂ ಭಾರತ ಗೆದ್ದಿದೆ.

Advertisement

ಏಷ್ಯನ್‌ ದಾಖಲೆ ಹೊಂದಿರುವ ತಜಿಂದರ್‌ಪಾಲ್‌ ಸಿಂಗ್‌ 20.23 ಮೀ. ದೂರದ ಸಾಧನೆಗೈದು ಮೊದಲಿಗರಾಗಿ ಮೂಡಿಬಂದರು. ಇದು ದ್ವಿತೀಯ ಸುತ್ತಿನಲ್ಲಿ ದಾಖಲಾಯಿತು. ಮೊದಲ ಸುತ್ತಿನಲ್ಲಿ ಅವರು ದಾಖಲಿಸಿದ ದೂರ 19.80 ಮೀಟರ್‌. ಇರಾನ್‌ನ ಗರಿಬ್‌ ಅಲ್‌ ಝಿಂಕಾವಿ ಸಬೆರಿ ಮೆಹಿª (19.98 ಮೀ.) ಬೆಳ್ಳಿ ಹಾಗೂ ಕಜಕಸ್ಥಾನದ ಇವಾನ್‌ ಇವನೋವ್‌ (19.87 ಮೀ.) ಕಂಚಿನ ಪದಕ ಗೆದ್ದರು.

28 ವರ್ಷದ ತೂರ್‌ ಶಾಟ್‌ಪುಟ್‌ ಚಿನ್ನ ಉಳಿಸಿಕೊಂಡ ಕೇವಲ 3ನೇ ಸಾಧಕ. ಕತಾರ್‌ನ ಬಿಲಾಲ್‌ ಸಾದ್‌ ಮುಬಾರಕ್‌ ಮತ್ತು ಕುವೈತ್‌ನ ಮೊಹಮ್ಮದ್‌ ಉಳಿದಿಬ್ಬರು.

ಮಿಂಚಿದ ಪಾರುಲ್‌
ಪಾರುಲ್‌ ಚೌಧರಿಗೆ ಇದು ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಕೂಟದಲ್ಲಿ ಒಲಿದ ಮೊದಲ ಚಿನ್ನದ ಪದಕ. ಅವರು 9 ನಿಮಿಷ, 38.76 ಸೆಕೆಂಡ್‌ಗಳಲ್ಲಿ ಈ ದೂರ ಕ್ರಮಿಸಿದರು. ವನಿತಾ ಸ್ಟೀಪಲ್‌ಚೇಸ್‌ ಸ್ಪರ್ಧೆಯನ್ನು 2007ರಲ್ಲಿ ಅಳವಡಿಸಲಾಗಿತ್ತು. ಭಾರತವಿಲ್ಲಿ ತನ್ನ ಪ್ರಭುತ್ವವನ್ನು ಸಾಬೀತುಪಡಿಸುತ್ತ ಬಂದಿದೆ. 2013 ಮತ್ತು 2017ರಲ್ಲಿ ಸುಧಾ ಸಿಂಗ್‌, 2015ರಲ್ಲಿ ಲಲಿತಾ ಬಾಬರ್‌ ಚಿನ್ನ ಜಯಿಸಿದ್ದರು. ಪಾರುಲ್‌ ಚೌಧರಿ 2017 ಮತ್ತು 2019ರಲ್ಲಿ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನಕ್ಕೆ ಕುಸಿದಿದ್ದರು.

ಇಲ್ಲಿ ಚಿನ್ನದ ಪದಕ ಗೆದ್ದವರೆಲ್ಲ ಆಗಸ್ಟ್‌ನಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುವ ಎಲ್ಲ ಸಾಧ್ಯತೆಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next