ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಏಷ್ಯಾ ಮೂಲದ ಅಮೆರಿಕನ್ನರ ಮೇಲೆ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಬುಧವಾರವಷ್ಟೇ ಮೂರು ಕಡೆ ದಾಳಿಯಾಗಿದ್ದು ಎಂಟು ಮಂದಿ ಅಸುನೀಗಿದ್ದಾರೆ. ಸಾವನ್ನಪ್ಪಿದವರಲ್ಲಿ ಆರು ಮಂದಿ ಏಷ್ಯಾದವರಾಗಿದ್ದಾರೆ ಎಂಬುದು ಆತಂಕದ ವಿಚಾರ.
ಇದು ಕೇವಲ ಬುಧವಾರದ ಘಟನೆಗಷ್ಟೇ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಏಷ್ಯಾ ಮೂಲದ ಅಮೆರಿಕನ್ನರು ದಾಳಿಯಾಗುತ್ತಿರುವುದು ಮಾಮೂಲಾಗಿದೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಬುಧವಾರದ ದಾಳಿಗೂ ಮುನ್ನ ಸಮೀಕ್ಷೆಯೊಂದರ ವರದಿ ಬಿಡುಗಡೆಯಾಗಿದ್ದು, ಇದರ ಪ್ರಕಾರ, ಶೇ.70ರಷ್ಟು ಏಷ್ಯಾ ಮೂಲದ ಅಮೆರಿಕನ್ನರು ಒಂದಲ್ಲ ಒಂದು ರೀತಿ ಕಿರುಕುಳಕ್ಕೆ ಈಡಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಇವೆಲ್ಲದಕ್ಕಿಂತ 2020ರಲ್ಲೇ ಹೆಚ್ಚು ದಾಳಿ ಪ್ರಕರಣಗಳಾಗಿವೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ. ಅಂದರೆ, ಕೊರೊನಾ ಕಾಣಿಸಿಕೊಂಡ ಮೇಲೆ ಈ ರೀತಿಯ ಪ್ರಕರಣಗಳು ಹೆಚ್ಚಾಗಿವೆಯಂತೆ. ಇದಕ್ಕೆ ಕಾರಣ, ಕೊರೊನಾ ವೈರಸ್ ಮೂಲ ಚೀನದ್ದು ಎಂಬುದು. ಕೊರೊನಾ ವೈರಸ್ ಉಗಮವಾದ ಮೇಲೆ ಚೀನದವರ ಮೇಲೆ ಅಮೆರಿಕನ್ನರ ದ್ವೇಷ ತುಸು ಹೆಚ್ಚಾಗಿದೆ. ಆದರೆ ಚೀನಿಯರ ಮೇಲಿನ ಕೋಪ ಇತರ ದೇಶದವರ ನೆಮ್ಮದಿಗೂ ಭಂಗ ತಂದಿದೆ. ಅಂದರೆ ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಚೀನದವರಂತೆಯೇ ಕಾಣುವ ಇತರದೇಶಗಳ ಮಂದಿಗೂ ಇಂಥ ಕಿರುಕುಳಗಳು ಸಾಮಾನ್ಯವಾಗಿವೆ.
ಬಿಡುಗಡೆಗೊಂಡಿರುವ ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಮೊದಲ 2 ತಿಂಗಳೇ 500 ಬಾರಿ ಏಷ್ಯಾ ಮೂಲದ ಅಮೆರಿಕನ್ನರನ್ನು ಟಾರ್ಗೆಟ್ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ 3,795 ಕೇಸು ದಾಖಲಾಗಿವೆ. ಇದರಲ್ಲಿ ಶೇ.68ರಷ್ಟು ಮಂದಿ ನಮ್ಮ ಮೇಲೆ ನಿಂದನೆಗಳಾಗುತ್ತಿವೆ ಎಂದಿದ್ದರೆ, ಶೇ.11ರಷ್ಟು ಮಂದಿ ನಮ್ಮ ಮೇಲೆ ದೈಹಿಕ ಹಲ್ಲೆಗಳಾಗಿವೆ ಎಂದಿದ್ದಾರೆ.
1918ರಲ್ಲೂ ಇದೇ ರೀತಿ ಅಮೆರಿಕದಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗಿತ್ತು. ಆಗ ಕಂಡು ಬಂದಿದ್ದ ಸಾಂಕ್ರಾಮಿಕ ರೋಗಕ್ಕೆ ಸ್ಪ್ಯಾನಿಷ್ ಫೂ ಎಂದು ಹೆಸರಿಡಲಾಗಿತ್ತು. ಈ ಮೂಲಕ ದೇಶವೊಂದರ ಮೇಲೆ ದ್ವೇಷ ಸಾಧಿಸಲಾಗಿತ್ತು. ಈಗ ಕೊರೊನಾ ವೈರಸ್‌ಗೂ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕುಂಗ್ ಫೂé ಎಂದು ಕರೆದಿದ್ದು, ಇದು ಚೀನದವರ ಮೇಲೆ ಮತ್ತಷ್ಟು ದ್ವೇಷ ಹೆಚ್ಚಲು ಕಾರಣವಾಗಿದೆ ಎಂದು ಹೇಳುತ್ತಾರೆ ತಜ್ಞರು.
ಇಂಥ ದಾಳಿಗಳು, ದ್ವೇಷ ಸರಿಯಲ್ಲ ಎಂದು ಹೇಳುತ್ತಾರೆ ತಜ್ಞರು. ಮೊದಲೇ ಅಮೆರಿಕ ವಲಸಿಗರ ದೇಶ. ವಲಸಿಗರ ದೇಶವಾಗಿರುವುದರಿಂದಲೇ ಬಹಳಷ್ಟು ವೈವಿಧ್ಯತೆಯನ್ನು ನೋಡುತ್ತಿದ್ದೇವೆ. ಆದರೆ ಇಂಥ ದಾಳಿಗಳು ಈ ವೈವಿಧ್ಯತೆಯನ್ನೇ ಹಾಳು ಮಾಡುತ್ತವೆ ಎಂಬ ಆತಂಕ ಇವರದ್ದು.