19ನೇ ಏಷ್ಯನ್ ಗೇಮ್ಸ್ ಶನಿವಾರ ಆರಂಭ. ಈಗಾಗಲೇ ಹಲವು ಸ್ಪರ್ಧೆಗಳು ನಡೆಯುತ್ತಿವೆ. ರವಿವಾರದಿಂದಲೇ ಭಾರತದ ಚಿನ್ನದ ಸದ್ದು ಕೇಳಿ ಬರಬಹುದು. ಭಾರತ ವುಶು ತಂಡಕ್ಕೆ ಚೀನ ವೀಸಾ ನಿರಾಕರಿಸಿದ ಸುದ್ದಿಯೂ ಬಂದಿದೆ. ಅದಕ್ಕೆ ಪ್ರತಿಯಾಗಿ ಭಾರತದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚೀನಕ್ಕೆ ಹೋಗುವುದಿಲ್ಲ ಅಂದಿದ್ದೂ ಆಗಿದೆ. ಚೀನ ದೇಶಕ್ಕೆ ಭಾರತದೊಂದಿಗೆ ತಕರಾರು ಮಾಡಿಕೊಳ್ಳದಿದ್ದರೆ ಸಮಾಧಾನ ಇರುವುದಿಲ್ಲ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ಇವನ್ನೆಲ್ಲ ಬದಿಗಿಟ್ಟು ಕ್ರೀಡಾ ದೃಷ್ಟಿಕೋನದಿಂದ ನೋಡುವುದಾದರೆ ಭಾರತ ಏಷ್ಯಾಡ್‌ನಲ್ಲಿ ಬಲಿಷ್ಠ ತಂಡಗಳಲ್ಲೊಂದು. ಆದರೆ ಭಾರತದ ಜನಸಂಖ್ಯೆ ಮತ್ತು ಗೆಲ್ಲುವ ಪದಕಗಳಿಗೆ ಹೋಲಿಸಿದರೆ ಅಜಗಜಾಂತರ.
ಇದುವರೆಗಿನ ಅಷ್ಟೂ ಏಷ್ಯಾಡ್‌ಗಳನ್ನು ಪರಿಗಣಿಸಿದರೆ ಭಾರತ ಸಾರ್ವಕಾಲಿಕವಾಗಿ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 155 ಚಿನ್ನ, 201 ಬೆಳ್ಳಿ, 316 ಕಂಚು ಸೇರಿ ಒಟ್ಟು 672 ಪದಕಗಳನ್ನು ಗೆದ್ದಿದೆ. ಪದಕ ಸಾಧನೆಯನ್ನೇ ಗಣಿಸುವುದಾದರೆ ಚೀನ, ಜಪಾನ್, ದ.ಕೊರಿಯಾಗಳು ಕ್ರಮವಾಗಿ 3,187, 3,054, 2,235 ಪದಕಗಳನ್ನು ಗೆದ್ದು ಸಾರ್ವ ಕಾಲಿಕವಾಗಿ ಅಗ್ರ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಈ ವಿಚಾರದಲ್ಲಿ ಭಾರತ ಭಾರೀ ಪ್ರಮಾಣದಲ್ಲಿ ಹಿಂದುಳಿದಿದೆ. ಇವೆಲ್ಲ ಈ ಹಿಂದಿನ 18 ಏಷ್ಯಾಡ್‌ಗಳಲ್ಲಿನ ಭಾರತದ ಸಾಧನೆ. ಆದರೆ ಈಗ ಭಾರತ ಬದಲಾಗಿದೆ. ಎಲ್ಲ ವಿಭಾಗಗಳಲ್ಲೂ ಅದ್ಭುತ ಸಾಧನೆಗಳೊಂದಿಗೆ ಮುನ್ನುಗ್ಗುತ್ತಿದೆ. ಕ್ರೀಡೆಯಲ್ಲೂ ತನ್ನದೇ ಆದ ಛಾಪು ಮೂಡಿಸಲು ಭರದ ಸಿದ್ಧತೆ ಮಾಡಿಕೊಂಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶದ ಪದಕ ಗಳಿಕೆಯಲ್ಲಿ ಗಣನೀಯ ಸಾಧನೆಯಾಗಿದ್ದೇ ಈ ಆಶಾವಾದಕ್ಕೆ ಕಾರಣ.
ಹಲವು ದಶಕಗಳ ಬಳಿಕ ಭಾರತ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. ಮೊದಲ ಬಾರಿಗೆ ಚಿನ್ನ, ಬೆಳ್ಳಿ, ಕಂಚು ಮೂರೂ ವಿಭಾಗಗಳಲ್ಲಿ ಪದಕ ಬಂದಿತ್ತು. ಒಲಿಂಪಿಕ್ಸ್‌ನಂತಹ ಜಗತ್ತಿನ ಬಲಿಷ್ಠ ದೇಶಗಳು ಸ್ಪರ್ಧಿಸುವ ಕೂಟದಲ್ಲೇ ಭಾರತ ಸುಧಾರಿತ ಪ್ರದರ್ಶನ ನೀಡಿರಬೇಕಾದರೆ, ಏಷ್ಯನ್ ಗೇಮ್ಸ್‌ನಲ್ಲಿ ಏಕೆ ಸಾಧ್ಯವಿಲ್ಲ?
ಸಾಧ್ಯವಿದೆ ಎಂಬ ಭರವಸೆಯಲ್ಲೇ ದೇಶದ ಕ್ರೀಡಾಸಂಸ್ಥೆಗಳು, ಕ್ರೀಡಾ ಸಚಿವಾಲಯಗಳು ಆ್ಯತ್ಲೀಟ್‌ಗಳ ತರಬೇತಿಗೆ ಹಣವನ್ನು ವೆಚ್ಚ ಮಾಡು ತ್ತಿವೆ, ಪರಿಶ್ರಮವನ್ನೂ ಹಾಕುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ಭಾರತದ ಕ್ರೀಡಾಜಗತ್ತಿನಲ್ಲಿ ಕಂಡುಬಂದ ಆಶಾದಾಯಕ ಬೆಳವಣಿಗೆಯಿದು. ಪದಕ ಗೆದ್ದ ಮೇಲೆ ಕೋಟಿಗಟ್ಟಲೇ ಹಣ ಕೊಡುವ ಹಳೆ ಚಾಳಿಯ ಬದಲು, ಅದಕ್ಕಿಂತ ಮುನ್ನವೇ ಗುಣಮಟ್ಟದ ತರಬೇತಿಗೆ ಹಣ ನೀಡುವ ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ವ್ಯವಸ್ಥೆ ಜಾರಿಯಾಗಿದೆ.
ಕೇಂದ್ರ ಸರಕಾರ ಆರಂಭಿಸಿದ ಈ ಕ್ರಮಕ್ಕೆ ರಾಜ್ಯ ಸರಕಾರಗಳೂ ಬೆಂಬಲ ನೀಡಿವೆ. ಈ ಬಾರಿ ಪದಕ ಗೆಲ್ಲುವ ಬಲವಾದ ಭರವಸೆಯನ್ನು ಹಲವು ಸ್ಪರ್ಧಿಗಳು, ತಂಡಗಳು ಮೂಡಿಸಿವೆ. ಕ್ರಿಕೆಟ್, ಹಾಕಿ, ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ ಗೆಲ್ಲುವುದು ಕಷ್ಟವೇ ಅಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಇನ್ನು ಫುಟ್‌ಬಾಲ್‌ನಲ್ಲಿ ಭಾರತ ಏಷ್ಯಾದ ಮಟ್ಟಿಗೆ ಬಲಿಷ್ಠ ತಂಡವೇ ಆದರೂ, ಈ ಕೂಟಕ್ಕೆ ಪೂರ್ಣ ಆಸಕ್ತಿಯಿಂದ ಭಾರತ ಸಿದ್ಧವಾಗಿಲ್ಲ ಎಂಬ ಸಂದೇಶವಂತೂ ಸ್ಪಷ್ಟವಾಗಿ ಸಿಕ್ಕಿದೆ. ಅದೇನೇ ಇದ್ದರೂ ಈ ಬಾರಿಯ ಏಷ್ಯಾಡ್‌ನಿಂದ ಭಾರತದ ಕ್ರೀಡಾ ಚಹರೆ ಬದಲಾಗಲಿದೆ ಎಂಬ ಬಲವಾದ ಭರವಸೆ ಹುಟ್ಟಿದೆ. ಭಾರತದ ಸ್ಪರ್ಧಿಗಳಿಗೆ ಶುಭಾಶಯಗಳು.