ಮನಿಲಾ (ಫಿಲಿಪ್ಪೀನ್ಸ್): ಭಾರತದ ಪುರುಷರ ತಂಡ “ಏಶ್ಯ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್’ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಶುಕ್ರವಾರದ ರೋಚಕ ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಭಾರತ 3-2 ಅಂತರದಿಂದ ಥಾಯ್ಲೆಂಡ್‌ಗೆ ಸೋಲುಣಿಸಿತು.
ನೆಚ್ಚಿನ ಆಟಗಾರರಾದ ಕಿಡಂಬಿ ಶ್ರೀಕಾಂತ್ ಮತ್ತು ಬಿ. ಸಾಯಿಪ್ರಣೀತ್ ಮೊದಲೆರಡು ಸಿಂಗಲ್ಸ್ ಸ್ಪರ್ಧೆಗಳಲ್ಲಿ ಆಘಾತಕಾರಿ ಸೋಲನುಭವಿಸಿದಾಗ ಭಾರತ ತೀವ್ರ ಸಂಕಟದಲ್ಲಿತ್ತು. ಆದರೆ ಮುಂದಿನ ಮೂರೂ ಪಂದ್ಯಗಳನ್ನು ಗೆದ್ದ ಭಾರತ ಸೆಮಿಫೈನಲ್ ಪ್ರವೇಶಿಸಿ ಸಂಭ್ರಮಿಸಿತು. ಇದರಲ್ಲಿ ಒಂದು ಸಿಂಗಲ್ ಮತ್ತು 2 ಡಬಲ್ಸ್ ಸ್ಪರ್ಧೆಗಳಿದ್ದವು.
ಭಾರತವಿನ್ನು ಕಳೆದೆರಡು ಬಾರಿಯ ಚಾಂಪಿಯನ್ ಇಂಡೋನೇಶ್ಯ ವಿರುದ್ಧ ಸೆಣಸಲಿದೆ. 2016ರ ಹೈದರಾಬಾದ್ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದ ಬಳಿಕ ಭಾರತ ಈ ಕೂಟದಲ್ಲಿ ಯಾವುದೇ ಪದಕ ಜಯಿಸಿಲ್ಲ.
ಭಾರತದ ಗೆಲುವಿನ ಖಾತೆ ತೆರೆದವರು ಎಂ.ಆರ್. ಅರ್ಜುನ್-ಧ್ರುವ ಕಪಿಲ. ಡಬಲ್ಸ್‌ನಲ್ಲಿ ಇವರು 21-18, 22-20 ಅಂತರದಿಂದ ಕಿಟಿನುಪೋಂಗ್ ಕೆಡ್ರೆನ್-ತನುಪಟ್ ವಿರಿಯಂಕುರ ಜೋಡಿಗೆ ಸೋಲುಣಿಸಿದರು. ಬಳಿಕ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ 21-19, 21-18ರಿಂದ ಸುಪನ್ಯು ಅವಿಹಿಂಗÕನಾನ್ ವಿರುದ್ಧ ಗೆದ್ದುಬಂದರು.
ಈ ಫಲಿತಾಂಶದ ಬಳಿಕ ಇತ್ತಂಡಗಳು 2-2 ಸಮಬಲ ಸಾಧಿಸಿದವು. ಸ್ಪರ್ಧೆ ರೋಚಕ ಘಟ್ಟ ಮುಟ್ಟಿತು. ಆದರೆ ಡಬಲ್ಸ್‌ನಲ್ಲಿ ಭಾರತ ಜಯಭೇರಿ ಮೊಳಗಿಸಿ ಥಾಯ್ ಹಾರಾಟವನ್ನು ಕೊನೆಗೊಳಿಸಿತು. ಇಲ್ಲಿ ಚಿರಾಗ್ ಶೆಟ್ಟಿ-ಕೆ. ಶ್ರೀಕಾಂತ್ ಸೇರಿಕೊಂಡು ಮನೀಪೋಂಗ್ ಜೊಂಗ್‌ಜಿತ್-ನಿಪಿಟ್‌ಪೋನ್ ಪೌಂಗ್‌ಪುವಾಪೆಟ್ ಜೋಡಿಯನ್ನು 21-15, 16-21, 21-15ರಿಂದ ಹಿಮ್ಮೆಟ್ಟಿಸಿದರು.