Advertisement

Asia Cup; ಲಂಕಾ ಎದುರಾಳಿ ಅಫ್ಘಾನ್‌ ಹಾದಿ ಕಠಿಣ: ಇಂದು ನಿರ್ಣಾಯಕ ಪಂದ್ಯ

12:33 AM Sep 05, 2023 | Team Udayavani |

ಲಾಹೋರ್‌: “ಬಿ’ ವಿಭಾಗದಿಂದ ಏಷ್ಯಾ ಕಪ್‌ ಸೂಪರ್‌-4 ಹಂತಕ್ಕೆ ಯಾರೆಲ್ಲ ಪ್ರವೇಶಿಸಲಿದ್ದಾರೆ ಎಂಬ ಕೌತುಕಕ್ಕೆ ಮಂಗಳವಾರ ರಾತ್ರಿ ತೆರೆ ಬೀಳಲಿದೆ. ಲಾಹೋರ್‌ನಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ಥಾನ ತಂಡಗಳು ಸೆಣಸಲಿದ್ದು, ಇದರಲ್ಲಿ ಅಫ್ಘಾನ್‌ “ಮಸ್ಟ್‌ ವಿನ್‌ ಹಾಗೂ ಬಿಗ್‌ ವಿನ್‌’ ಒತ್ತಡದಲ್ಲಿದೆ. ಇದು ಲೀಗ್‌ ಹಂತದ ಅಂತಿಮ ಪಂದ್ಯವೂ ಆಗಿದೆ.

Advertisement

“ಬಿ’ ವಿಭಾಗದಲ್ಲೀಗ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಒಂದೊಂದು ಪಂದ್ಯವನ್ನು ಗೆದ್ದು ಮುಂದಿನ ಹಂತ ಪ್ರವೇಶಿಸುವ ನೆಚ್ಚಿನ ತಂಡಗಳೆನಿಸಿವೆ. ರನ್‌ರೇಟ್‌ನಲ್ಲಿ ಲಂಕಾ ಮುಂದಿದೆ (+0.951). ಬಾಂಗ್ಲಾ ದ್ವಿತೀಯ ಸ್ಥಾನದಲ್ಲಿದೆ (+0.373). ಆದರೆ ಅಫ್ಘಾನಿಸ್ಥಾನ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ರನ್‌ರೇಟ್‌ ಮೈನಸ್‌ನಲ್ಲಿದೆ (-1.780). ಹೀಗಾಗಿ ಅಫ್ಘಾನ್‌ಗೆ ಸಾಮಾನ್ಯ ಗೆಲುವು ಸಾಲದು. ಅದು ದೊಡ್ಡ ಅಂತರದಿಂದ ಲಂಕೆಯನ್ನು ಮಗುಚಬೇಕಿದೆ. ಆದರೆ ಲಾಹೋರ್‌ನ ಬ್ಯಾಟಿಂಗ್‌ ಟ್ರ್ಯಾಕ್‌ನಲ್ಲಿ ಇಂಥದೊಂದು ಪವಾಡ ಅಸಾಧ್ಯ ಎಂದೇ ಭಾವಿಸಬೇಕಾಗುತ್ತದೆ. ಹೀಗಾಗಿ ಲಂಕಾ ಮತ್ತು ಬಾಂಗ್ಲಾದ ಸೂಪರ್‌-4 ಎಂಟ್ರಿ ಗ್ಯಾರಂಟಿ ಎನ್ನಲಡ್ಡಿಯಿಲ್ಲ.

ಮೊದಲ ಪಂದ್ಯವನ್ನು ಬ್ಯಾಟಿಂಗ್‌ ವೈಫ‌ಲ್ಯದಿಂದ ಸೋತಿದ್ದ ಬಾಂಗ್ಲಾದೇಶ, ರವಿವಾರ ಅಫ್ಘಾನಿಸ್ಥಾನ ವಿರುದ್ಧ ಮುನ್ನೂರರಾಚೆ ಬೆಳೆದು ದೊಡ್ಡ ಜಯವನ್ನು ಸಾಧಿಸಿತಷ್ಟೇ ಅಲ್ಲ, ರನ್‌ರೇಟನ್ನೂ ಹೆಚ್ಚಿಸಿಕೊಂಡಿತು. ಲಂಕೆಯನ್ನು ಎದುರಿಸಲಿರುವ ಅಫ್ಘಾನ್‌ಗೆ ಇದು ಭಾರೀ ಹೊಡೆತವಿಕ್ಕಿದೆ.

ಘಾತಕ ವೇಗಿಗಳ ಕೊರತೆ ಅನುಭವಿಸುತ್ತಿರುವ ಅಫ್ಘಾನ್‌ ಸ್ಪಿನ್‌ದ್ವಯರಾದ ರಶೀದ್‌ ಖಾನ್‌ ಮತ್ತು ಮುಜೀಬ್‌ ಜದ್ರಾನ್‌ ಅವರನ್ನಷ್ಟೇ ನೆಚ್ಚಿಕೊಂಡಿದೆ. ಆದರೆ ಬಾಂಗ್ಲಾ ವಿರುದ್ಧ ರಶೀದ್‌ “ವಿಕೆಟ್‌ ಲೆಸ್‌’ ಎನಿಸಿದ್ದರು. ಲಂಕಾ ವಿರುದ್ಧ ರಶೀದ್‌ ಮ್ಯಾಜಿಕ್‌ ಮಾಡಬೇಕಿದೆ. ಫೀಲ್ಡಿಂಗ್‌ ವಿಭಾಗವೂ ಸುಧಾರಿಸಬೇಕಿದೆ.

ಬ್ಯಾಟಿಂಗ್‌ ವಿಭಾಗದಲ್ಲಿ ಓಪನರ್‌ಗಳಾದ ರೆಹಮಾನುಲ್ಲ ಗುರ್ಬಜ್‌ ಹಾಗೂ ಇಬ್ರಾಹಿಂ ಜದ್ರಾನ್‌ ಉತ್ತಮ ಫಾರ್ಮ್ನಲ್ಲಿರುವುದು ಅಫ್ಘಾನ್‌ ಪಾಲಿನ ಆಶಾಕಿರಣ.

Advertisement

“ನಾವು ಎಲ್ಲ ವಿಭಾಗಗಳಲ್ಲೂ ಸುಧಾರಣೆ ಕಾಣಬೇಕಿದೆ. ನಮ್ಮ ಬೌಲಿಂಗ್‌, ಫೀಲ್ಡಿಂಗ್‌ ಅಷ್ಟೇನೂ ಉತ್ತಮವಾಗಿಲ್ಲ. ಲಾಹೋರ್‌ ನಮ್ಮ ದೇಶದ ಸಮೀಪದಲ್ಲಿದೆ. ನಮ್ಮ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತರಗೊಂಡಿದ್ದಾರೆ. ಇವರೆಲ್ಲ ನಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ನಾವು ಉತ್ತಮ ಪ್ರದರ್ಶನ ನೀಡಬೇಕಿದೆ’ ಎಂದಿದ್ದಾರೆ ಅಫ್ಘಾನ್‌ ನಾಯಕ ಹಶ್ಮತುಲ್ಲ ಶಾಹಿದಿ.

ಸ್ಟಾರ್‌ ಆಟಗಾರರ ಗೈರು
ಇನ್ನೊಂದೆಡೆ ಶ್ರೀಲಂಕಾ ಸ್ಟಾರ್‌ ಆಟಗಾರರ ಗೈರಲ್ಲಿ ಹೋರಾಡಬೇಕಾದ ಒತ್ತಡದಲ್ಲಿದೆ. ಪೇಸ್‌ ಬೌಲರ್‌ಗಳಾದ ಮತೀಶ ಪತಿರಣ ಬಾಂಗ್ಲಾ ವಿರುದ್ಧ 4 ವಿಕೆಟ್‌ ಉರುಳಿಸಿ ಬೌಲಿಂಗ್‌ ಭಾರ ಹೊರುವಲ್ಲಿ ಯಶಸ್ವಿಯಾಗಿದ್ದಾರೆ. ಮಿಸ್ಟರಿ ಸ್ಪಿನ್ನರ್‌ ಮಹೀಶ ತೀಕ್ಷಣ ಬೌಲಿಂಗ್‌ ಆರಂಭಿಸುವ ಮೂಲಕ ವೇಗಿಗಳ ಗೈರನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ.

ಬಾಂಗ್ಲಾ ವಿರುದ್ಧ ಕೇವಲ 165 ರನ್‌ ಗುರಿ ಪಡೆದರೂ ಲಂಕೆಯ ಅಗ್ರ ಕ್ರಮಾಂಕ ತೀವ್ರ ಕುಸಿತಕ್ಕೆ ಒಳಗಾಗಿತ್ತು. ಸದೀರ ಸಮರವಿಕ್ರಮ ಮತ್ತು ಚರಿತ ಅಸಲಂಕ ಉತ್ತಮ ಜತೆಯಾಟವೊಂದನ್ನು ನಿಭಾಯಿಸಿ ಲಂಕೆಯನ್ನು ದಡ ತಲುಪಿಸಿದ್ದರು. ಅಫ್ಘಾನ್‌ ವಿರುದ್ಧ ಲಂಕೆಯ ಬ್ಯಾಟಿಂಗ್‌ ವಿಭಾಗ ಚೇತರಿಕೆ ಕಾಣಬೇಕಾದುದು ಅತ್ಯಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next