ಕೊಲಂಬೊ: ಭಾರತ-ಪಾಕಿಸ್ಥಾನ ನಡುವಿನ ಕ್ರಿಕೆಟ್ ಪಂದ್ಯ ವಿಶ್ವದ ಯಾವ ಭಾಗದಲ್ಲಿ ನಡೆದರೂ ವೀಕ್ಷಕರ ಕೊರತೆ ಎದುರಾಗದು. ಸ್ಟೇಡಿಯಂ ಯಾವತ್ತೂ ಹೌಸ್‌ಫುಲ್ ಆಗಿರುತ್ತದೆ. ಆದರೆ ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಇತ್ತಂಡಗಳು 2 ಸಲ ಎದುರಾದರೂ ವೀಕ್ಷಕರ ಕೊರತೆ ಕಾಡಿದೆ.
ಇದನ್ನೂ ಓದಿ: Asia Cup ; ಪತರುಗುಟ್ಟಿದ ಪಾಕಿಸ್ಥಾನ ; ಭಾರತಕ್ಕೆ ಅತ್ಯಮೋಘ ಜಯ
ಪಲ್ಲೆಕೆಲೆಯಲ್ಲಿ ಭಾರತ-ಪಾಕ್ ಪಂದ್ಯ ವಾರಾಂತ್ಯದಲ್ಲಿ ನಡೆದರೂ ವೀಕ್ಷಕರ ಸಂಖ್ಯೆ ವಿರಳವಾಗಿತ್ತು. ಇದೀಗ ಕೊಲಂಬೊ ಸರದಿ. ಈ ಸೂಪರ್-4 ಪಂದ್ಯ ರವಿವಾರ ನಡೆದರೂ ಪ್ರೇಕ್ಷಕರು ಮಾತ್ರ ಆಸಕ್ತಿ ತೋರಿಲ್ಲ. ಸೋಮವಾರ ಅಪರಾಹ್ನವೇ ಮಳೆ ಸುರಿದುದರಿಂದ ಕ್ರಿಕೆಟ್ ಪ್ರೇಮಿಗಳು ಪಂದ್ಯದ ಗೊಡವೆಯಲ್ಲೇ ಇರಲಿಲ್ಲ. ಈ ಪಂದ್ಯಾವಳಿಯನ್ನು ಆಯೋಜಿಸುವುದು ಪಾಕಿಸ್ಥಾನವಾದರೂ ಪ್ರೇಕ್ಷಕರಿಲ್ಲದೆ ಆರ್ಥಿಕ ನಷ್ಟವಾಗಿದೆ ಎಂದು ಸಂಘಟಕರು ಬೇಸರಿಸಿದ್ದಾರೆ.
“ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಸ್ಟೇಡಿಯಂನತ್ತ ಮುಖ ಮಾಡುತ್ತಾರೆ, ಆರ್ಥಿಕ ವಾಗಿಯೂ ಲಾಭವಾಗಲಿದೆ ಎಂಬುದು ನಮ್ಮ ನಿರೀಕ್ಷೆ ಆಗಿತ್ತು. ಆದರೆ ಇದು ಹುಸಿಯಾಗಿದೆ. ಈ ಪಂದ್ಯದ 15 ಸಾವಿರ ಟಿಕೆಟ್‌ಗಳು ಮಾರಾಟಗೊಂಡಿಲ್ಲ. ಟಿಕೆಟ್ ದರವನ್ನೂ ಕಡಿಮೆ ಮಾಡಲಾಗಿತ್ತು. ಆದರೂ ಕ್ರಿಕೆಟ್ ಅಭಿಮಾನಿಗಳು ಆಸಕ್ತಿ ತೋರಲಿಲ್ಲ’ ಎಂದು ಲಂಕಾ ಕ್ರಿಕೆಟ್ ಅಧಿಕಾರಿಯೊಬ್ಬರು ಪಂದ್ಯದ ಆರಂಭಕ್ಕೂ ಮೊದಲು ಹೇಳಿರುವುದು ಉಲ್ಲೇಖನೀಯ.