Advertisement

ವನಿತಾ ಏಷ್ಯಾ ಕಪ್‌ ಕ್ರಿಕೆಟ್‌: ಜೆಮಿಮಾ ಜಬರ್ದಸ್ತ್ ಬ್ಯಾಟಿಂಗ್‌

10:35 PM Oct 01, 2022 | Team Udayavani |

ಬಾಂಗ್ಲಾದೇಶ: ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾ ವಳಿಯ ಫೇವರಿಟ್‌ ತಂಡವಾಗಿರುವ ಭಾರತ ಗೆಲುವಿನ ಶುಭಾರಂಭ ಮಾಡಿದೆ. ಶನಿವಾರದ ತನ್ನ ಮೊದಲ ಮುಖಾಮುಖಿಯಲ್ಲಿ ಶ್ರೀಲಂಕಾವನ್ನು 41 ರನ್ನುಗಳಿಂದ ಕೆಡವಿದೆ.

Advertisement

ಭಾರತ 6 ವಿಕೆಟ್‌ ನಷ್ಟದಲ್ಲಿ 150 ರನ್‌ ಬಾರಿಸಿದರೆ, ಶ್ರೀಲಂಕಾ 18.2 ಓವರ್‌ಗಳಲ್ಲಿ 109ಕ್ಕೆ ಕುಸಿಯಿತು. ಭಾರತವಿನ್ನು ಸೋಮವಾರ ಮಲೇ ಷ್ಯಾವನ್ನು ಎದುರಿಸಲಿದೆ.

ಜೆಮಿಮಾ ಜೀವನಶ್ರೇಷ್ಠ ಆಟ
ಬ್ಯಾಟಿಂಗ್‌ನಲ್ಲಿ ಜೆಮಿಮಾ ರೋಡ್ರಿಗಸ್‌, ಬೌಲಿಂಗ್‌ನಲ್ಲಿ ಬಲಗೈ ಸ್ಪಿನ್ನರ್‌ ದಯಾಳನ್‌ ಹೇಮಲತಾ ಮಿಂಚಿನ ಪ್ರದರ್ಶನ ನೀಡಿದರು.

ಗಾಯಾಳಾಗಿ ಇಂಗ್ಲೆಂಡ್‌ ಪ್ರವಾಸ ತಪ್ಪಿಸಿಕೊಂಡಿದ್ದ ಜೆಮಿಮಾ ಪಂದ್ಯದಲ್ಲೇ ಸರ್ವಾಧಿಕ 76 ರನ್‌ ಬಾರಿಸುವ ಮೂಲಕ ಭರ್ಜರಿ ಪುನರಾಗಮನ ಸಾರಿದರು. ಇದು ಅವರ ಜೀವನಶ್ರೇಷ್ಠ ಸಾಧನೆ. ಶಫಾಲಿ ವರ್ಮ (10) ಮತ್ತು ಸ್ಮತಿ ಮಂಧನಾ (6) ವಿಕೆಟ್‌ ಬೇಗನೇ ಉರುಳಿದ ಬಳಿಕ ಜೆಮಿಮಾ ತಂಡದ ರಕ್ಷಣೆಗೆ ನಿಂತರು. ಇವರಿಗೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (33) ಉತ್ತಮ ಬೆಂಬಲವಿತ್ತರು. 3ನೇ ವಿಕೆಟಿಗೆ 92 ರನ್‌ ಒಟ್ಟುಗೂಡಿತು.

ಜೆಮಿಮಾ 53 ಎಸೆತಗಳಿಂದ ತಮ್ಮ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಸಿಡಿಸಿದ್ದು 11 ಬೌಂಡರಿ ಹಾಗೂ ಒಂದು ಸಿಕ್ಸರ್‌. ಕೌರ್‌ ಅವರ 33 ರನ್‌ 30 ಎಸೆತಗಳಿಂದ ಬಂತು (2 ಬೌಂಡರಿ, 1 ಸಿಕ್ಸರ್‌). ಇವರಿಬ್ಬರನ್ನು ಹೊರತುಪಡಿಸಿದರೆ ಅಜೇಯ 13 ರನ್‌ ಮಾಡಿದ ಡಿ. ಹೇಮಲತಾ ಅವರದೇ ಹೆಚ್ಚಿನ ಗಳಿಕೆ. ಮಧ್ಯಮ ವೇಗಿ ಒಶಾದಿ ರಣಸಿಂಘೆ 3 ವಿಕೆಟ್‌ ಉರುಳಿಸಿದರು.

Advertisement

ಲಂಕೆಗೆ ಹರ್ಷಿತಾ ಮಾಧವಿ ಬಿರುಸಿನ ಆರಂಭ ಒದಗಿಸಿದ್ದರು. ಮೊದಲ ವಿಕೆಟಿಗೆ 3.3 ಓವರ್‌ಗಳಿಂದ 25 ರನ್‌ ಹರಿದು ಬಂತು. ದೀಪ್ತಿ ಶರ್ಮ ಈ ಜೋಡಿಯನ್ನು ಬೇರ್ಪಡಿಸಿದ ಬಳಿಕ ಭಾರತದ ಬೌಲರ್‌ಗಳ ಕೈ ಮೇಲಾಯಿತು. ಫೀಲ್ಡಿಂಗ್‌ ಕೂಡ ಅಮೋಘ ಮಟ್ಟದಲ್ಲಿತ್ತು. ನಾಯಕಿ ಚಾಮರಿ ಅತಪಟ್ಟು (5), ಮಾಲಾÏ ಶೆಹಾನಿ (9) ಬೇಗನೇ ಪೆವಿಲಿಯನ್‌ ಸೇರಿಕೊಂಡರು. ಮಧ್ಯಮ ಕ್ರಮಾಂಕದ ಹಾಸಿನಿ ಪೆರೆರ ಅವರಿಂದ ಮಾತ್ರ ಸಣ್ಣದೊಂದು ಹೋರಾಟ ಕಂಡುಬಂತು. 30 ರನ್‌ ಮಾಡಿದ ಹಾಸಿನಿ ಲಂಕಾ ಸರದಿಯ ಟಾಪ್‌ ಸ್ಕೋರರ್‌.

4ಕ್ಕೆ 61 ರನ್‌ ಮಾಡಿ ಹೋರಾಟದ ಹಾದಿಯಲ್ಲಿದ್ದ ಶ್ರೀಲಂಕಾ, 48 ರನ್‌ ಅಂತರದಲ್ಲಿ ಕೊನೆಯ 6 ವಿಕೆಟ್‌ ಕಳೆದುಕೊಂಡಿತು. ಪೂಜಾ ವಸ್ತ್ರಾಕರ್‌ ಮತ್ತು ದೀಪ್ತಿ ಶರ್ಮ ತಲಾ 2 ವಿಕೆಟ್‌ ಉರುಳಿಸಿದರು.

ಬಾಂಗ್ಲಾಕ್ಕೆ ಸುಲಭ ಜಯ
ಕೂಟದ ಉದ್ಘಾಟನ ಪಂದ್ಯಲ್ಲಿ ಹಾಲಿ ಚಾಂಪಿಯನ್‌, ಆತಿಥೇಯ ಬಾಂಗ್ಲಾದೇಶ ಬಹಳ ಸುಲಭದಲ್ಲಿ ಥಾಯ್ಲೆಂಡ್‌ಗೆ ಸೋಲುಣಿಸಿತು. ಅಂತರ 9 ವಿಕೆಟ್‌.

ಅನನುಭವಿ ಥಾಯ್ಲೆಂಡ್‌ 19.4 ಓವರ್‌ಗಳಲ್ಲಿ 82ಕ್ಕೆ ಆಲೌಟಾದರೆ, ಬಾಂಗ್ಲಾ 11.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 88 ರನ್‌ ಹೊಡೆಯಿತು.

ಥಾಯ್ಲೆಂಡ್‌ ಪರ ಫ‌ನಿತಾ ಮಾಯಾ 26, ನತ್ತಕನ್‌ ಚಂತಮ್‌ 20 ರನ್‌ ಮಾಡಿದರು. 9 ರನ್ನಿಗೆ 3 ವಿಕೆಟ್‌ ಕಿತ್ತ ರುಮಾನಾ ಅಹ್ಮದ್‌ ಬಾಂಗ್ಲಾದ ಯಶಸ್ವಿ ಬೌಲರ್‌.ಶಮಿಮಾ ಸುಲ್ತಾನಾ 49ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ-6 ವಿಕೆಟಿಗೆ 150 (ಜೆಮಿಮಾ 76, ಕೌರ್‌ 33, ಹೇಮಲತಾ ಔಟಾಗದೆ 13, ಶಫಾಲಿ 10, ರಣಸಿಂಘೆ 32ಕ್ಕೆ 3). ಶ್ರೀಲಂಕಾ-18.2 ಓವರ್‌ಗಳಲ್ಲಿ 109 (ಹಾಸಿನಿ 30, ಹರ್ಷಿತಾ 26, ರಣಸಿಂಘೆ 11, ಹೇಮಲತಾ 15ಕ್ಕೆ 3, ಪೂಜಾ 12ಕ್ಕೆ 2, ದೀಪ್ತಿ 15ಕ್ಕೆ 2).
ಪಂದ್ಯಶ್ರೇಷ್ಠ: ಜೆಮಿಮಾ ರೋಡ್ರಿಗಸ್‌.

Advertisement

Udayavani is now on Telegram. Click here to join our channel and stay updated with the latest news.

Next