Advertisement

Asia Cup; ಲಂಕಾ, ಬಾಂಗ್ಲಾಕ್ಕೆ ಗಾಯಾಳುಗಳದ್ದೇ ಚಿಂತೆ

10:55 PM Aug 30, 2023 | Team Udayavani |

ಪಲ್ಲೆಕೆಲೆ: ಹಾಲಿ ಚಾಂಪಿಯನ್‌ ಶ್ರೀಲಂಕಾ ಗುರುವಾರ ಏಷ್ಯಾ ಕಪ್‌ ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಿದೆ. ಪಲ್ಲೆಕೆಲೆ ಸ್ಟೇಡಿಯಂನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

Advertisement

ಎರಡೂ ತಂಡಗಳ ಒಂದೇ ಸಮಸ್ಯೆಯೆಂದರೆ, ಗಾಯಾಳುಗಳದ್ದು. ಹೀಗಾಗಿ ಶ್ರೀಲಂಕಾ ಮಂಗಳವಾರ ಸಂಜೆ ತನಕ ತನ್ನ ತಂಡವನ್ನು ಪ್ರಕಟಿಸಿರಲಿಲ್ಲ. ಹಸರಂಗ, ಚಮೀರ, ಲಹಿರು ಕುಮಾರ, ಮಧುಶಂಕ ಅವರೆಲ್ಲ ಗಾಯಾಳಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಕುಸಲ್‌ ಪೆರೆರ ಅವರಿಗೆ ಕೋವಿಡ್‌ ಅಂಟಿಕೊಂಡಿದೆ.

ಸಾಲದ್ದಕ್ಕೆ ಲಂಕೆಯ ಈ ವರ್ಷದ ಏಕದಿನ ನಿರ್ವಹಣೆ ಕೂಡ ಅತ್ಯಂತ ಕಳಪೆಯಾಗಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್‌ ಕೈಯಲ್ಲಿ ಕ್ರಮವಾಗಿ 0-3, 0-2 ಅಂತರದ ಕ್ಲೀನ್‌ಸ್ವೀಪ್ ಸಂಕಟ ಅನುಭವಿಸಿದೆ. ಇದರ ಜತೆಗೆ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಆಡುವ ದುರಂತವನ್ನೂ ಎದುರಿಸಿತು. ಹೀಗಾಗಿ ಆತಿಥೇಯ ತಂಡವಾಗಿದ್ದೂ ಈ ಕೂಟದಲ್ಲಿ ಶ್ರೀಲಂಕಾ ಉನ್ನತ ಸಾಧನೆಗೈದೀತು ಎಂಬ ನಂಬಿಕೆಯನ್ನು ಇರಿಸಿಕೊಳ್ಳುವಂತಿಲ್ಲ.

ನಾಯಕ ದಸುನ್‌ ಶಣಕ ಇಡೀ ವರ್ಷದಲ್ಲಿ ಆಡಿದ್ದು ಒಂದು ಸ್ಫೋಟಕ ಇನ್ನಿಂಗ್ಸ್‌ ಮಾತ್ರ. ಅದು ಭಾರತ ವಿರುದ್ಧ ಬಾರಿಸಿದ ಶತಕ. ಈ ಪಂದ್ಯಾವಳಿಯಲ್ಲಿ ಶಣಕ ಫಾರ್ಮ್ ಲಂಕಾ ಪಾಲಿಗೆ ನಿರ್ಣಾಯಕವಾಗಲಿದೆ.

ಶ್ರೀಲಂಕಾ ಬ್ಯಾಟಿಂಗ್‌ ಸರದಿಯ ಆಧಾರಸ್ತಂಭ ಗಳಾಗಿ ಗೋಚರಿಸುವವರು ಮೂವರು ಮಾತ್ರ. ಪಥುಮ್‌ ನಿಸ್ಸಂಕ (2023ರಲ್ಲಿ 687 ರನ್‌), ದಿಮುತ್‌ ಕರುಣಾರತ್ನೆ (481 ರನ್‌) ಮತ್ತು ಚರಿತ ಅಸಲಂಕ (341 ರನ್‌). ಬೌಲಿಂಗ್‌ ವಿಭಾಗ ಕೂಡ ಬಲಹೀನಗೊಂಡಿದೆ. ಫ್ರಂಟ್‌ಲೆçನ್‌ ಬೌಲರ್‌ಗಳ ಕೊರತೆ ಎದ್ದು ಕಾಣುತ್ತಿದೆ. ಸ್ಪಿನ್ನರ್‌ ಮಹೀಶ್‌ ತೀಕ್ಷಣ (2023ರಲ್ಲಿ 23 ವಿಕೆಟ್‌), ಪೇಸರ್‌ ಕಸುನ್‌ ರಜಿತ (14) ಮಾತ್ರ ಬೌಲಿಂಗ್‌ ಭಾರ ಹೊರಬೇಕಾದ ಸ್ಥಿತಿ ಇದೆ.

Advertisement

ಬಾಂಗ್ಲಾ ನಿರ್ವಹಣೆಯೂ ಕಳಪೆ
ಬಾಂಗ್ಲಾದೇಶ ಕೂಡ ಇದೇ ದೋಣಿಯಲ್ಲಿ ಪಯಣಿಸುತ್ತಿದೆ. ತಮಿಮ್‌ ಇಕ್ಬಾಲ್‌, ಇಬಾದತ್‌ ಹುಸೇನ್‌, ಕೀಪರ್‌ ಲಿಟನ್‌ ದಾಸ್‌ ಅವರ ಸೇವೆ ತಂಡಕ್ಕೆ ದೊರಕುತ್ತಿಲ್ಲ. ದಾಸ್‌ ಕೊನೆಯ ಕ್ಷಣದಲ್ಲಿ ತಂಡವನ್ನು ತೊರೆಯಬೇಕಾದ ಸಂಕಟಕ್ಕೆ ಸಿಲುಕಿದರು. ಇವರ ಬದಲು 30 ವರ್ಷದ ಅನಾಮುಲ್‌ ಹಕ್‌ ಬಿಜೋಯ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

ನಾಯಕ ಶಕಿಬ್‌ ಅಲ್‌ ಹಸನ್‌, ಮುಶ್ಫಿಕರ್‌ ರಹೀಂ ಮತ್ತು ನಜ್ಮುಲ್‌ ಹುಸೇನ್‌ ಅವರ ಬ್ಯಾಟಿಂಗ್‌ ಫಾರ್ಮ್ ಬಾಂಗ್ಲಾ ಪಾಲಿಗೆ ಮಹತ್ವದ್ದಾಗಲಿದೆ. ಈ ಮೂವರು ಪ್ರಸಕ್ತ ಸೀಸನ್‌ನಲ್ಲಿ 400 ಪ್ಲಸ್‌ ರನ್‌ ಬಾರಿಸಿದ್ದಾರೆ. ಯುವ ಬ್ಯಾಟರ್‌ ತೌಹಿದ್‌ ಹೃದಯ್‌ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.ಲಂಕಾದಂತೆ ಬಾಂಗ್ಲಾದ ಈ ವರ್ಷದ ಏಕದಿನ ನಿರ್ವಹಣೆ ಕೂಡ ಕಳಪೆ. ತವರಲ್ಲಿ ಇಂಗ್ಲೆಂಡ್‌ ಮತ್ತು ಅಫ್ಘಾನಿಸ್ಥಾನ ವಿರುದ್ಧ ಸರಣಿ ಸೋತಿದೆ.

“ಬಿ’ ವಿಭಾಗ “ಗ್ರೂಫ್ ಆಫ್ ಡೆತ್‌’ ಆಗಿದ್ದು, ಮೊದಲ ಗೆಲುವು ಕಂಡ ತಂಡದ ಹಾದಿ ಸುಗಮ ಎನ್ನಲಡ್ಡಿಯಿಲ್ಲ. ಮುಂದಿನ ಪಂದ್ಯದಲ್ಲಿ ಎರಡೂ ತಂಡಗಳು ಅಪಾಯಕಾರಿ ಅಫ್ಘಾನಿಸ್ಥಾನವನ್ನು ಎದುರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next