ಬೆಂಗಳೂರು: ಮುಂಬರುವ ಏಷ್ಯಾ ಕಪ್ ಮತ್ತು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಭಾರತ ತಂಡ ಭರ್ಜರಿ ತಯಾರಿ ನಡೆಸುತ್ತಿದೆ. ಬೆಂಗಳೂರಿನ ಹೊರವಲಯವಾದ ಆಲೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪೂರ್ವಸಿದ್ಧತಾ ಶಿಬಿರ ನಡೆಯುತ್ತಿದ್ದು, ಇದಕ್ಕಾಗಿ 15ರಷ್ಟು ನೆಟ್ ಬೌಲರ್‌ಗಳನ್ನು ಬಳಸಿಕೊಳ್ಳಲಾಗಿದೆ.
ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಆ. 30ರಿಂದ ಆರಂಭವಾಗಲಿದ್ದು, ಭಾರತ ತನ್ನೆಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಕಳೆದ ಕೆಲವು ವರ್ಷಗಳಿಂದ ಐಸಿಸಿ ಸೇರಿದಂತೆ ಮಹತ್ವದ ಟೂರ್ನಿಗಳನ್ನು ಗೆಲ್ಲಲು ವಿಫಲವಾಗಿರುವ ಭಾರತ ಏಷ್ಯಾ ಕಪ್ ಮತ್ತು ವಿಶ್ವಕಪ್ ಗೆಲ್ಲಲು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಇವುಗಳಲ್ಲಿ ಅಧಿಕ ಸಂಖ್ಯೆಯ ನೆಟ್ ಬೌಲರ್‌ಗಳ ಪ್ರಯೋಗವೂ ಒಂದು. ಭಾರತದ ಬ್ಯಾಟರ್‌ಗಳಿಗೆ 15 ಮಂದಿ ನೆಟ್ ಬೌಲರ್ ಬೌಲಿಂಗ್ ನಡೆಸುತ್ತಿದ್ದಾರೆ.
ಭಾರತ ಈ ಕೂಟಗಳಲ್ಲಿ ಎಡಗೈ ವೇಗಿಗಳಾದ ಪಾಕಿಸ್ಥಾನದ ಶಾಹೀನ್ ಶಾ ಅಫ್ರಿದಿ, ನ್ಯೂಜಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್ ಮೊದಲಾದವರ ಪ್ರಬಲ ಸವಾಲನ್ನು ಎದುರಿಸಬೇಕಿದೆ. ಇದಕ್ಕಾಗಿ ಎಡಗೈ ಸೀಮರ್ ಅನಿಕೇತ್ ಚೌಧರಿ ಅವರನ್ನು ನೆಟ್ ಬೌಲರ್ ಆಗಿ ಬಳಸಿಕೊಳ್ಳಲಾಗಿದೆ. 33 ವರ್ಷದ ಚೌಧರಿ ರಾಜಸ್ಥಾನದವರಾಗಿದ್ದು, 75 ಪ್ರಥಮ ದರ್ಜೆ ಪಂದ್ಯಗಳಿಂದ 124 ವಿಕೆಟ್ ಕೆಡವಿದ್ದಾರೆ. ಇವರೊಂದಿಗೆ ಉಮ್ರಾನ್ ಮಲಿಕ್, ಕುಲದೀಪ್ ಸೇನ್, ಯಶ್ ದಯಾಳ್, ಸಾಯಿ ಕಿಶೋರ್, ರಾಹುಲ್ ಚಹರ್, ತುಷಾರ್ ದೇಶಪಾಂಡೆ ಕೂಡ ಭಾರತ ತಂಡದ ಆಟಗಾರರಿಗೆ ಬೌಲಿಂಗ್ ನಡೆಸುತ್ತಿದ್ದಾರೆ.
ಯೋ ಯೋ ಟೆಸ್ಟ್
ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ಕಡ್ಡಾಯವಾಗಿ ಯೋ ಯೋ ಟೆಸ್ಟ್ ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡವರೆಲ್ಲರೂ ತೇರ್ಗಡೆಯಾಗಿದ್ದಾರೆ. ಜಸ್‌ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮ, ಸಂಜು ಸ್ಯಾಮ್ಸನ್ ಮತ್ತು ಕೆ.ಎಲ್. ರಾಹುಲ್ ಈ ಟೆಸ್ಟ್‌ನಲ್ಲಿ ಪಾಲ್ಗೊಂಡಿಲ್ಲ ಎನ್ನಲಾಗಿದೆ.