ಮುಂಬೈ: ಭಾರತದ ಫುಟ್ಬಾಲ್ ದಂತಕಥೆ, ಕ್ರಿಕೆಟ್ ಪಾರಮ್ಯದ ಭಾರತದ ಕಾಲ್ಚೆಂಡು ಆಟಕ್ಕೆ ಹೊಸ ಭಾಷ್ಯ ಬರೆದ ಸುನಿಲ್ ಚೇತ್ರಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಜೂನ್ 6ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ದ ನಡೆಯಲಿರುವ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯವು ಸುನಿಲ್ ಚೇತ್ರಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ. ಇದರೊಂದಿಗೆ ಎರಡು ದಶಕದ ತನ್ನ ಸುದೀರ್ಘ, ಅಮೋಘ ವೃತ್ತಿಜೀವನಕ್ಕೆ ತೆರೆ ಎಳೆಯಲಿದ್ದಾರೆ.
ಸುದೀರ್ಘ ಸೇವೆ ಸಲ್ಲಿಸಿದ ರಾಷ್ಟ್ರೀಯ ತಂಡದ ನಾಯಕ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ ವೀಡಿಯೊ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಭಾರತವು ಪ್ರಸ್ತುತ ಎ ಗುಂಪಿನಲ್ಲಿ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕತಾರ್ ಅಗ್ರಸ್ಥಾನದಲ್ಲಿದೆ.
“ಕಳೆದ 19 ವರ್ಷಗಳಲ್ಲಿ ನಾನು ನೆನಪಿಸಿಕೊಳ್ಳುವ ಭಾವನೆಯು ಕರ್ತವ್ಯ, ಒತ್ತಡ ಮತ್ತು ಅಪಾರ ಸಂತೋಷದ ಉತ್ತಮ ಸಂಯೋಜನೆಯಾಗಿದೆ” ಎಂದು 39 ವರ್ಷದ ಛೇತ್ರಿ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸುವಾಗ ಹೇಳಿದರು.
ಚೇತ್ರಿ ಅವರು ಕಳೆದ ಮಾರ್ಚ್‌ನಲ್ಲಿ ಭಾರತಕ್ಕಾಗಿ ತಮ್ಮ 150 ನೇ ಪಂದ್ಯವನ್ನು ಆಡಿದರು. ಗುವಾಹಟಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ನಡೆದ ಈ ಪಂದ್ಯದಲ್ಲಿ ಅವರು ಗೋಲು ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ 1-2 ಅಂತರದಲ್ಲಿ ಸೋಲನುಭವಿಸಿತ್ತು.
2005ರಲ್ಲಿ ಪದಾರ್ಪಣೆ ಮಾಡಿದ್ದ ಚೇತ್ರಿ ದೇಶಕ್ಕಾಗಿ 94 ಗೋಲು ಗಳಿಸಿದ್ದಾರೆ. ಅವರು ಭಾರತದ ಸಾರ್ವಕಾಲಿಕ ಟಾಪ್ ಸ್ಕೋರರ್ ಮತ್ತು ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರನಾಗಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿಯ ನಂತರ ಸಕ್ರಿಯ ಆಟಗಾರರ ಪೈಕಿ ಅತೀ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದಾರೆ.