Advertisement

ಏಶ್ಯ ಕಪ್‌: ದೊಡ್ಡ ಪಂದ್ಯಕ್ಕೊಂದು ರಿಹರ್ಸಲ್‌

09:53 AM Sep 18, 2018 | Team Udayavani |

ದುಬಾೖ: ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್‌ ಭಾರತದ ಅಭಿಯಾನ ಮಂಗಳವಾರದಿಂದ ಆರಂಭವಾಗಲಿದೆ. “ಎ’ ವಿಭಾಗದ ಮುಖಾಮುಖೀಯಲ್ಲಿ, ಕೂಟದ ಅತ್ಯಂತ ದುರ್ಬಲ ತಂಡವೆಂದೇ ಗುರುತಿಸಲ್ಪಡುವ ಹಾಂಕಾಂಗ್‌ ವಿರುದ್ಧ ಟೀಮ್‌ ಇಂಡಿಯಾ ಮೊದಲ ಪಂದ್ಯವಾಡಲಿದೆ. ಇದರ ಮರುದಿನವೇ ಪಾಕಿಸ್ಥಾನ ವಿರುದ್ಧ “ಬಿಗ್‌ ಗೇಮ್‌’ನಲ್ಲಿ ಪಾಲ್ಗೊಳ್ಳಬೇಕಿರುವ ರೋಹಿತ್‌ ಪಡೆಯ ಪಾಲಿಗೆ ಇದೊಂದು ರಿಹರ್ಸಲ್‌ ಆಗಲಿದೆ.

Advertisement

ಹಾಂಕಾಂಗ್‌ ಈಗಾಗಲೇ ಪಾಕಿಸ್ಥಾನ ವಿರುದ್ಧ ತನ್ನ ಆರಂಭಿಕ ಪಂದ್ಯವನ್ನು ಆಡಿದೆ. ಏಕಪಕ್ಷೀಯವಾಗಿ ಸಾಗಿದ ಈ ಮುಖಾಮುಖೀಯನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ. ಬಹುಶಃ ಭಾರತದ ವಿರುದ್ಧವೂ ಪರಿಸ್ಥಿತಿ ಬದಲಾಗಲಿಕ್ಕಿಲ್ಲ ಎಂಬುದೊಂದು ಲೆಕ್ಕಾಚಾರ. ಫ‌ಲಿತಾಂಶ ಉಲ್ಟಾಪಲ್ಟಾ ಆಗಬೇಕಾದರೆ ಪವಾಡವೇ ಸಂಭವಿಸಬೇಕು. ಅಂದಮಾತ್ರಕ್ಕೆ ಅನನುಭವಿ ಹಾಂಕಾಂಗ್‌ ತಂಡವನ್ನು ಭಾರತ ಲಘುವಾಗಿ ಪರಿಗಣಿಸುವ ಹಾಗಿಲ್ಲ. 

ಕಾಡಲಿದೆ ಕೊಹ್ಲಿ ಗೈರು
ಈ ಸರಣಿಯಲ್ಲಿ ಭಾರತಕ್ಕೆ ಪ್ರಮುಖವಾಗಿ ಕಾಡಲಿರುವುದು ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಗೈರು. ಕಳೆದ ಇಂಗ್ಲೆಂಡ್‌ ಪ್ರವಾಸದ ವೇಳೆ ಭಾರತ ಟೆಸ್ಟ್‌ ಸರಣಿಯನ್ನು ಹೀನಾಯವಾಗಿ ಕಳೆದುಕೊಂಡರೂ ಕೊಹ್ಲಿಯ ಬ್ಯಾಟಿಂಗ್‌ ಫಾರ್ಮ್ಗೆ ಯಾವುದೇ ಧಕ್ಕೆ ಆಗಿರಲಿಲ್ಲ. ಅವರು 500 ಪ್ಲಸ್‌ ರನ್‌ ಪೇರಿಸಿ ಪ್ರಚಂಡ ಬ್ಯಾಟಿಂಗ್‌ ಫಾರ್ಮ್ ಪ್ರದರ್ಶಿಸಿದ್ದರು. ಹೀಗಾಗಿ ಕೊಹ್ಲಿ ಅನುಪಸ್ಥಿತಿ ಭಾರತವನ್ನು ಖಂಡಿತವಾಗಿಯೂ ಕಾಡಲಿದೆ. ಮುಖ್ಯವಾಗಿ ಪಾಕಿಸ್ಥಾನದಂಥ ತಂಡಕ್ಕೆ “ಎದುರಾಳಿ ತಂಡದಲ್ಲಿ ಕೊಹ್ಲಿ ಇಲ್ಲ’ ಎನ್ನುವುದೇ ಹೆಚ್ಚು ಖುಷಿ ಕೊಡುವ, ನೈತಿಕ ಬಲವನ್ನು ಹೆಚ್ಚಿಸುವ ಸಂಗತಿ. ಹೀಗಾಗಿ ಕೊಹ್ಲಿ ಗೈರನ್ನು ಮರೆಸುವ ರೀತಿಯಲ್ಲಿ ಭಾರತ ಬ್ಯಾಟಿಂಗ್‌ ನಡೆಸಬೇಕಿದೆ. 

ಹಾಂಕಾಂಗ್‌ ವಿರುದ್ಧ ಇದು ದೊಡ್ಡ ಸಮಸ್ಯೆ ಯಾಗದು. ಆದರೆ ಈ ಪಂದ್ಯವನ್ನು ಪಾಕಿಸ್ಥಾನ ವಿರುದ್ಧದ ತಯಾರಿಗೆ ಮೀಸಲಿಟ್ಟು, ಸೂಕ್ತ ಹಾಗೂ ಪರಿಪೂರ್ಣ ಆಡುವ ಬಳಗವೊಂದನ್ನು ಅಂತಿಮಗೊಳಿಸಲು ಹಾಂಕಾಂಗ್‌ ಪಂದ್ಯವೇ ಮೊದಲ ಹಾಗೂ ಕಡೆಯ ಮೆಟ್ಟಿಲಾಗಿದೆ. ಹೀಗಾಗಿ ನಾಯಕ ರೋಹಿತ್‌ ಶರ್ಮ ಅವರ ಬ್ಯಾಟಿಂಗ್‌ ಫಾರ್ಮ್, ಧೋನಿ ಅವರ ಅನುಭವ, ಧವನ್‌-ರಾಹುಲ್‌ ಅವರ ಹೊಡಿಬಡಿ ಆಟ, ಪಾಂಡೆ-ಜಾಧವ್‌ ಜೋಡಿಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌, ಪಾಂಡ್ಯ ಅವರ ಆಲ್‌ರೌಂಡ್‌ ಶೋ ನಿರ್ಣಾಯಕ. ಮುಂಬರುವ ಮಹತ್ವದ ವಿಶ್ವಕಪ್‌ ದೃಷ್ಟಿಯಿಂದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಹೆಚ್ಚು ಬಲಿಷ್ಠಗೊಳ್ಳುವ ಅಗತ್ಯವಿದೆ. 
ಕಳೆದ ಇಂಗ್ಲೆಂಡ್‌ ಸರಣಿಯ ವೇಳೆ ಭಾರತದ ಬ್ಯಾಟ್ಸ್‌ಮನ್‌ಗಳು “ಇನ್‌ಕಮಿಂಗ್‌ ಡೆಲಿವರಿ’ಗಳಿಗೆ ಉತ್ತರಿಸುವಲ್ಲಿ ಎಡವಿದ್ದರು. ಇಲ್ಲಿ ಪಾಕ್‌ ಎಡಗೈ ವೇಗಿಗಳಾದ ಆಮಿರ್‌, ಉಸ್ಮಾನ್‌ ಕೂಡ ಇಂಥದೇ ಸಮಸ್ಯೆಯೊಡ್ಡುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಅತ್ಯಗತ್ಯ. 

ಬ್ಯಾಟಿಂಗಿಗೆ ಹೋಲಿಸಿದರೆ ಭಾರತ ಬೌಲಿಂಗ್‌ ಹೆಚ್ಚು ವೈವಿಧ್ಯಮಯವಾಗಿದ್ದು, ನಂಬಲರ್ಹ ಮಟ್ಟದಲ್ಲಿದೆ. ಭುವನೇಶ್ವರ್‌-ಬುಮ್ರಾ, ಕುಲದೀಪ್‌-ಚಾಹಲ್‌ ಜೋಡಿ ದಾಳಿ ಇಲ್ಲಿ ನಿರ್ಣಾಯಕ. ಬೆನ್ನುನೋವಿನಿಂದ ವಿಶ್ರಾಂತಿಯಲ್ಲಿದ್ದ ಭುವನೇಶ್ವರ್‌ ಪಾಲಿಗೆ ಹಾಂಕಾಂಗ್‌ ಎದುರಿನ ಪಂದ್ಯ ಉತ್ತಮ ಅಭ್ಯಾಸವಾಗಬೇಕಿದೆ.

Advertisement

ಕಾಡುತ್ತಿದೆ ವೀಕ್ಷಕರ ಕೊರತೆ
ಈ ವರೆಗಿನ ಮೂರೂ ಪಂದ್ಯಗಳಿಗೆ ವೀಕ್ಷಕರ ಕೊರತೆ ತೀವ್ರವಾಗಿ ಕಾಡಿದೆ. ಯುಎಇ ಕ್ರಿಕೆಟ್‌ ಅಭಿಮಾನಿಗಳೆಲ್ಲ ಭಾರತ-ಪಾಕಿಸ್ಥಾನ ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೋ ಏನೋ. ಆದರೆ ದುಬಾೖಯಲ್ಲಿ ಭಾರತೀಯರ ಸಂಖ್ಯೆ ದೊಡ್ಡ ಮಟ್ಟದಲ್ಲಿರುವುದರಿಂದ ಹಾಂಕಾಂಗ್‌ ವಿರುದ್ಧದ ಪಂದ್ಯದ ವೇಳೆ ಸ್ಟೇಡಿಯಂ ತುಂಬಬಹುದೆಂಬ ನಿರೀಕ್ಷೆ ಇದೆ. ಇತ್ತ ಭಾರತ-ಪಾಕಿಸ್ಥಾನ ಪಂದ್ಯಕ್ಕೆ ಸಂಘಟಕರು ಈಗಾಗಲೇ ಟಿಕೆಟ್‌ ದರದಲ್ಲಿ ಭಾರೀ ಹೆಚ್ಚಳ ಮಾಡಿದ್ದಾಗಿ ವರದಿಯಾಗಿದೆ. ಉದಾಹರಣೆಗೆ, “ವಿಶೇಷ ಆಸನ’ಗಳ ಟಿಕೆಟ್‌ ದರ 1,600 ಡಾಲರ್‌ ಆಗಿರುತ್ತದೆ. ಭಾರತೀಯ ಮೌಲ್ಯದಲ್ಲಿ ಈ ಮೊತ್ತ ಸುಮಾರು 1.15 ಲಕ್ಷ ರೂ. ಆಗಲಿದೆ!

ಭಾರತ: ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಅಂಬಾಟಿ ರಾಯುಡು, ಮನೀಷ್‌ ಪಾಂಡೆ, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌.

ಹಾಂಕಾಂಗ್‌: ಅಂಶುಮನ್‌ ರಥ್‌ (ನಾಯಕ), ನಿಜಾಕತ್‌ ಖಾನ್‌, ಬಾಬರ್‌ ಹಯಾತ್‌, ಕ್ರಿಸ್‌ ಕಾರ್ಟರ್‌, ಕಿಂಚಿತ್‌ ಷಾ, ಎಹಸಾನ್‌ ಖಾನ್‌, ಐಜಾಜ್‌ ಖಾನ್‌, ಸ್ಕಾಟ್‌ ಮೆಕೇನಿ, ತನ್ವೀರ್‌ ಅಫ‌jಲ್‌, ಎಹಸಾನ್‌ ನವಾಜ್‌, ನದೀಂ ಅಹ್ಮದ್‌.
ಆರಂಭ: ಸಂಜೆ 5.00
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next