Advertisement
ಕೂಟದ ಅಗ್ರ ರ್‍ಯಾಂಕಿಂಗ್ ತಂಡವಾಗಿರುವ ಭಾರತ ಈವರೆಗೆ ತನ್ನ ಸ್ಥಾನಮಾನಕ್ಕೆ ತಕ್ಕ ಪ್ರದರ್ಶನ ನೀಡುತ್ತಲೇ ಅಜೇಯವಾಗಿ ಮುನ್ನುಗ್ಗಿ ಬಂದಿದೆ. ಲೀಗ್ ಹಂತದ ಎಲ್ಲ 3 ಪಂದ್ಯಗಳನ್ನು ಗೆದ್ದ ಮನ್‌ಪ್ರೀತ್ ಸಿಂಗ್ ಪಡೆ ಅಜೇಯವಾಗಿ ಸೂಪರ್-4 ಹಂತಕ್ಕೆ ನೆಗೆದಿತ್ತು. ಇಲ್ಲಿ ದಕ್ಷಿಣ ಕೊರಿಯಾ ವಿರುದ್ಧ 1-1 ಡ್ರಾ ಸಾಧಿಸಿದ ಬಳಿಕ ಮಲೇಶ್ಯವನ್ನು 6-2 ಗೋಲುಗಳ ಭಾರೀ ಅಂತರದಿಂದ ಬಗ್ಗುಬಡಿಯಿತು. ಹೀಗಾಗಿ 4 ಅಂಕಗಳೊಂದಿಗೆ ಸೂಪರ್-4 ಹಂತದಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಮಲೇಶ್ಯ (3 ಅಂಕ), ಕೊರಿಯಾ (2 ಅಂಕ) ಮತ್ತು ಪಾಕಿಸ್ಥಾನ (1 ಅಂಕ) ಅನಂತರದ ಸ್ಥಾನದಲ್ಲಿವೆ. ಪಾಕ್ ವಿರುದ್ಧ ಭಾರತ ಕನಿಷ್ಠ ಡ್ರಾ ಸಾಧಿಸಿದರೂ ರವಿವಾರದ ಪ್ರಶಸ್ತಿ ಹಣಾಹಣಿಯ ಟಿಕೆಟ್ ಸಂಪಾದಿಸಲಿದೆ.
ಸೂಪರ್-4 ಹಂತದ ಮೊದಲ ಪಂದ್ಯದಲ್ಲಷ್ಟೇ ಭಾರತಕ್ಕೆ ಗೆಲುವು ಮರೀಚಿಕೆಯಾಗಿತ್ತು. ಕೊರಿಯಾ ವಿರುದ್ಧದ ಈ ಪಂದ್ಯದಲ್ಲಿ ಭಾರತ 1-1 ಡ್ರಾಗೆ ಸಮಾಧಾನಪಡಬೇಕಾಯಿತು. ಇದನ್ನೊಂದು ಎಚ್ಚರಿಕೆಯ ಗಂಟೆಯೆಂದೇ ಭಾವಿಸಿದ ಮನ್‌ಪ್ರೀತ್ ಪಡೆ, ಮುಂದಿನ ಪಂದ್ಯದಲ್ಲೇ ಮಲೇಶ್ಯವನ್ನು 6-2 ಗೋಲುಗಳಿಂದ ಅಡ್ಡಡ್ಡ ಮಲಗಿಸಿತು. ಭಾರತದಂತೆ ಅಜೇಯವಾಗಿ ಈ ಸುತ್ತಿಗೆ ಬಂದಿದ್ದ ಮಲೇಶ್ಯಕ್ಕೆ ಎದುರಾದ ಮೊದಲ ಆಘಾತ ಇದಾಗಿತ್ತು. ಈ ಗೆಲುವಿನಲ್ಲಿ ಮೈಮರೆಯದೆ, ಪಾಕಿಸ್ಥಾನವನ್ನು ಈಗಾಗಲೇ ಒಮ್ಮೆ ಮಣಿಸಿದ್ದೇವೆ ಎಂದು ಲಘುವಾಗಿ ಪರಿಗಣಿಸದೆ ಆಡಿದರೆ ಭಾರತ ನಿರಾಳವಾಗಿ ಫೈನಲ್‌ಗೆ ಲಗ್ಗೆ ಇಡುವುದು ಖಚಿತ.
ಕೋಚ್ ಶೋರ್ಡ್ ಮರಿನ್ ಮಾರ್ಗದರ್ಶನದಲ್ಲಿ ಮೊದಲ ಪಂದ್ಯಾವಳಿಯಲ್ಲಿ ಆಡುತ್ತಿರುವ ಭಾರತ ಪೆನಾಲ್ಟಿ ಕಾರ್ನರ್ ಒಂದನ್ನು ಹೊರತುಪಡಿಸಿ ಉಳಿದೆಲ್ಲ ವಿಭಾಗ ಗಳಲ್ಲೂ ಅಮೋಘ ಪ್ರದರ್ಶನ ನೀಡಿದೆ. ಆಕಾಶ್‌ದೀಪ್ ಸಿಂಗ್, ರಮಣ್‌ದೀಪ್ ಸಿಂಗ್, ಎಸ್.ವಿ. ಸುನೀಲ್, ಲಲಿತ್ ಉಪಾಧ್ಯಾಯ, ಗುರ್ಜಂತ್ ಸಿಂಗ್ ಅತ್ಯಾಕರ್ಷಕ ಫೀಲ್ಡ್ ಗೋಲುಗಳ ಮೂಲಕ ಮಿಂಚು ಹರಿಸಿದ್ದಾರೆ.
Related Articles
ಆದರೆ ಪಾಕಿಸ್ಥಾನದ ಸ್ಥಿತಿ ಇದಕ್ಕೆ ತದ್ವಿರುದ್ಧ. ಕೇವಲ ಒಂದು ಅಂಕವನ್ನು ಕೈಲಿರಿಸಿಕೊಂಡಿರುವ ಪಾಕಿಸ್ಥಾನ ಕೂಟದಿಂದ ಬಹುತೇಕ ಹೊರಬಿದ್ದಿದೆ. ಭಾರೀ ಅಂತರದ ಗೆಲುವು, ದಕ್ಷಿಣ ಕೊರಿಯಾ-ಮಲೇಶ್ಯ ನಡುವಿನ ದಿನದ ಇನ್ನೊಂದು ಪಂದ್ಯದ ಫಲಿತಾಂಶ ಕೂಡ ಪಾಕ್ ಹಾದಿಯನ್ನು ಸುಗಮಗೊಳಿಸೀತೆಂದು ಹೇಳಲಾಗದು. ಅಕಸ್ಮಾತ್ ಪಾಕ್ ಜಯ ಸಾಧಿಸಿ, ಕೊರಿಯಾ-ಮಲೇಶ್ಯ ಪಂದ್ಯ ಡ್ರಾಗೊಂಡರೆ ಆಗ ಫೈನಲ್ ಲೆಕ್ಕಾಚಾರ ತಲೆ ಕೆಳಗಾಗಲಿದೆ. ಯಾವುದಕ್ಕೂ ಭಾರತ ಸೋಲದೇ ಉಳಿಯುವುದು ಕ್ಷೇಮ!
Advertisement