Advertisement
ಗುರುವಾರದ ಅಂತಿಮ ಗ್ರೂಪ್ ಪಂದ್ಯ ಮುಗಿಯುತ್ತಿದ್ದಂತೆಯೇ ಶುಕ್ರವಾರದಿಂದಲೇ ಮುಂದಿನ ಸುತ್ತಿನ ಹಣಾಹಣಿ ಮೊದಲ್ಗೊಳ್ಳಲಿದೆ. ಭಾರತ, ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ತಂಡಗಳು ಈ ಹಂತದಲ್ಲಿ ಪರಸ್ಪರ ಮುಖಾಮುಖೀಯಾಗಲಿವೆ.
Related Articles
ದುಬಾೖಯಲ್ಲಿ ನಡೆಯುವ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಅಬುಧಾಬಿಯಲ್ಲಿ ಪಾಕಿಸ್ಥಾನ-ಅಫ್ಘಾನಿಸ್ಥಾನ ಸೆಣಸಾಡಲಿವೆ. ಹಾಂಕಾಂಗ್ ಮತ್ತು ಶ್ರೀಲಂಕಾ ಕೂಟದಿಂದ ಹೊರಬಿದ್ದಿವೆ.
Advertisement
ಹಾಂಕಾಂಗ್ ವಿರುದ್ಧ ಪರದಾಡಿ, ಪಾಕಿಸ್ಥಾನದ ಸದ್ದಡಗಿಸಿದ ರೋಹಿತ್ ಶರ್ಮ ನಾಯಕತ್ವದ ಭಾರತ, ಶುಕ್ರವಾರದ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಮಶ್ರಫೆ ಮೊರ್ತಜ ನಾಯಕತ್ವದ ಬಾಂಗ್ಲಾ ಏಕದಿನ ಮಟ್ಟಿಗೆ ಬಲಿಷ್ಠ ಹಾಗೂ ಸಶಕ್ತ ತಂಡವೇ ಆಗಿದೆ. ಭಾರತ ಸ್ವಲ್ಪವೇ ಯಾಮಾರಿದರೂ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇಲ್ಲದಿಲ್ಲ.
ಪಾಕನ್ನು ಮಣಿಸಿದ ಹುರುಪುಇತ್ತ ಬದ್ಧ ಎದುರಾಳಿ ಪಾಕ್ ವಿರುದ್ಧ ನಿರೀಕ್ಷೆಗೂ ಮೀರಿದ ಪ್ರದರ್ಶನವಿತ್ತು ಗೆದ್ದು ಬಂದ ಭಾರತ ಹೊಸ ಹುರುಪಿನಲ್ಲಿದೆ. ಬಾಂಗ್ಲಾ ವಿರುದ್ಧವೂ ಇದೇ ಲಯವನ್ನು ಕಾಯ್ದುಕೊಳ್ಳುವುದು ರೋಹಿತ್ ಪಡೆಯ ಮುಂದಿರುವ ಯೋಜನೆ. ಆರಂಭಿಕರಾದ ರೋಹಿತ್ ಶರ್ಮ-ಶಿಖರ್ ಧವನ್ ಎರಡೂ ಪಂದ್ಯಗಳಲ್ಲಿ ಉತ್ತಮ ಅಡಿಪಾಯ ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ ಗೈರಲ್ಲಿ ಅಂಬಾಟಿ ರಾಯುಡು ಆಟ ಭರವಸೆದಾಯಕವಾಗಿದೆ. ಹೀಗಾಗಿ ಕೆ.ಎಲ್. ರಾಹುಲ್ ವೇಟಿಂಗ್ ಲಿಸ್ಟ್‌ನಲ್ಲೇ ಇರಬೇಕೋ ಏನೋ. ದಿನೇಶ್ ಕಾರ್ತಿಕ್ ಮೇಲೆ ಆಡಳಿತ ಮಂಡಳಿಗೆ ಭಾರೀ ವಿಶ್ವಾಸ ಇರುವುದರಿಂದ ಮನೀಷ್ ಪಾಂಡೆಗೆ ಅವಕಾಶ ದೂರ ಎಂದೇ ಭಾವಿಸಬೇಕಾಗುತ್ತದೆ. ಹಾಂಕಾಂಗ್ ಎದುರು ಸೊನ್ನೆ ಸುತ್ತಿದ ಅನುಭವಿ ಧೋನಿ ಅವರ ಬ್ಯಾಟಿಂಗ್ ಫಾರ್ಮ್ ಹೇಗೆ ಎಂಬುದನ್ನು ತಿಳಿಯಬೇಕಿದೆ. ಕೇದಾರ್ ಜಾಧವ್ ಅವರ ಆಲ್‌ರೌಂಡ್ ಯಶಸ್ಸು ಭಾರತದ ಪಾಲಿಗೊಂದು ಬೋನಸ್ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಗೈರು ಭಾರತಕ್ಕೆ ದೊಡ್ಡ ಹೊಡೆತವೇನೂ ಅಲ್ಲ. ಇವರ ಬದಲು ಮತ್ತೆ ಖಲೀಲ್ ಅಹ್ಮದ್ ಆಡುವ ಸಾಧ್ಯತೆ ಇದೆ.
ಪಾಕಿಸ್ಥಾನವನ್ನು ಉರುಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಭುವನೇಶ್ವರ್ ಆ್ಯಂಡ್ ಕಂಪೆನಿ ತನ್ನ “ಘಾತಕ ಮಟ್ಟ’ವನ್ನು ಉಳಿಸಿಕೊಂಡೀತೆಂಬ ವಿಶ್ವಾಸ ಇದೆ. ಏಶ್ಯ ಕಪ್: ಸೂಪರ್-4 ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ ಆರಂಭ
ಸೆ. 21 (ಶುಕ್ರವಾರ) ಭಾರತ-ಬಾಂಗ್ಲಾದೇಶ ದುಬಾೖ ಸಂಜೆ 5.00
ಸೆ. 21 (ಶುಕ್ರವಾರ) ಪಾಕಿಸ್ಥಾನ-ಅಫ್ಘಾನಿಸ್ಥಾನ ಅಬುಧಾಬಿ ಸಂಜೆ 5.00
ಸೆ. 23 (ರವಿವಾರ) ಭಾರತ-ಪಾಕಿಸ್ಥಾನ ದುಬಾೖ ಸಂಜೆ 5.00
ಸೆ. 23 (ರವಿವಾರ) ಬಾಂಗ್ಲಾದೇಶ-ಅಫ್ಘಾನಿಸ್ಥಾನ ಅಬುಧಾಬಿ ಸಂಜೆ 5.00
ಸೆ. 25 (ಮಂಗಳವಾರ) ಭಾರತ-ಅಫ್ಘಾನಿಸ್ಥಾನ ದುಬಾೖ ಸಂಜೆ 5.00
ಸೆ. 26 (ಬುಧವಾರ) ಪಾಕಿಸ್ಥಾನ-ಬಾಂಗ್ಲಾದೇಶ ಅಬುಧಾಬಿ ಸಂಜೆ 5.00
* ಸಮಯ: ಭಾರತೀಯ ಕಾಲಮಾನ
* ಪ್ರಸಾರ: ಸ್ಟಾರ್ ನ್ಪೋರ್ಟ್ಸ್