Advertisement

Asia Cup: ಇಂದು ಅಫ್ಘಾನ್‌ ಅಖಾಡಕ್ಕೆ; ಗೆದ್ದರಷ್ಟೇ ಬಾಂಗ್ಲಾಕ್ಕೆ ಉಳಿಗಾಲ

11:34 PM Sep 02, 2023 | Team Udayavani |

ಲಾಹೋರ್‌: ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ರವಿವಾರದ ಪಂದ್ಯದಲ್ಲಿ ಅಪಾಯಕಾರಿ ತಂಡವಾದ ಅಫ್ಘಾನಿಸ್ಥಾನ ಅಖಾಡಕ್ಕೆ ಇಳಿಯಲಿದೆ. ಲಾಹೋರ್‌ನ “ಕರ್ನಲ್‌ ಗದ್ದಾಫಿ ಸ್ಟೇಡಿಯಂ’ನಲ್ಲಿ ನಡೆಯುವ “ಬಿ’ ವಿಭಾಗದ ಮುಖಾಮುಖಿಯಲ್ಲಿ ಅದು ಬಾಂಗ್ಲಾದೇಶವನ್ನು ಎದುರಿಸಲಿದೆ. ಬಾಂಗ್ಲಾಕ್ಕೆ ಇದು ಅಳಿವು ಉಳಿವಿನ ಪಂದ್ಯವಾ ದ್ದರಿಂದ ಕೂಟದ ಕೌತುಕ ಸಹಜವಾಗಿಯೇ ಹೆಚ್ಚಿದೆ.

Advertisement

ಗುರುವಾರ ಪಲ್ಲೆಕೆಲೆಯಲ್ಲಿ ಶ್ರೀಲಂಕಾ ವಿರುದ್ಧ ಆಡಲಾದ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಎಡವಿದ ಕಾರಣ ಬಾಂಗ್ಲಾದೇಶ ಪಾಲಿಗೆ ಇದು ಮಾಡು-ಮಡಿ ಪಂದ್ಯವಾಗಿ ಪರಿಣಮಿಸಿದೆ. ಸೋತರೆ ಅದು ಕೂಟದಿಂದ ನಿರ್ಗಮಿಸಲಿದೆ. ಹೀಗಾಗಿ ಅಫ್ಘಾನ್‌ ಪಡೆಯನ್ನು ಬಗ್ಗುಬಡಿಯಲೇಬೇಕಾದ ಒತ್ತಡ ಶಕಿಬ್‌ ಅಲ್‌ ಹಸನ್‌ ತಂಡದ ಮೇಲಿದೆ.

ಬ್ಯಾಟಿಂಗ್‌ ವೈಫ‌ಲ್ಯ
ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಸೋಲಲು ಮುಖ್ಯ ಕಾರಣ ಬ್ಯಾಟಿಂಗ್‌ ವೈಫ‌ಲ್ಯ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡೂ 164 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟ್‌ ಆಗಿತ್ತು. ವನ್‌ಡೌನ್‌ ಬ್ಯಾಟರ್‌ ನಜ್ಮುಲ್‌ ಹುಸೇನ್‌ ಏಕಾಂಗಿಯಾಗಿ ಹೋರಾಡಿ 89 ರನ್‌ ಬಾರಿಸಿದ ಕಾರಣ ಬಾಂಗ್ಲಾದಿಂದ ಇಷ್ಟಾದರೂ ರನ್‌ ಗಳಿಸಲು ಸಾಧ್ಯವಾಗಿತ್ತು. ಅನುಭವಿ ಶಕಿಬ್‌ ಅಲ್‌ ಹಸನ್‌ ಸೇರಿದಂತೆ ಉಳಿದವರರ್ಯಾರಿಂದಲೂ ಲಂಕಾ ದಾಳಿಯನ್ನು ತಡೆದು ನಿಲ್ಲಲು ಸಾಧ್ಯವಾಗಿರಲಿಲ್ಲ. ವೇಗಿ ಮತೀಶ ಪತಿರಣ ಘಾತಕ ಸ್ಪೆಲ್‌ ಮೂಲಕ ಬಾಂಗ್ಲಾ ಟೈಗರ್‌ಗಳನ್ನು ಬೇಟೆಯಾಡಿದ್ದರು.
ಚೇಸಿಂಗ್‌ ವೇಳೆ ಶ್ರೀಲಂಕಾ ಕೂಡ ಆರಂಭಿಕ ಆಘಾತಕ್ಕೆ ಸಿಲುಕಿತು. ಆದರೆ ಸದೀರ ಸಮರವಿಕ್ರಮ ಮತ್ತು ಚರಿತ ಅಸಲಂಕ ಕ್ರೀಸ್‌ ಆಕ್ರಮಿಸಿಕೊಂಡ ಪರಿಣಾಮ ಲಂಕಾ 39 ಓವರ್‌ಗಳಲ್ಲಿ ಗುರಿ ಮುಟ್ಟಿತ್ತು.

ಗೆಲುವಿನ ಖಾತೆ ತೆರೆದು ಕೂಟದಲ್ಲಿ ಮುಂದುವರಿಯ ಬೇಕಾದರೆ ಬಾಂಗ್ಲಾದ ಬ್ಯಾಟಿಂಗ್‌ ವಿಭಾಗ ಕ್ಲಿಕ್‌ ಆಗಬೇಕಾದುದು ಅತ್ಯಗತ್ಯ. ಆದರೆ ಮೊಹಮ್ಮದ್‌ ನೈಮ್‌-ತಾಂಜಿದ್‌ ಹಸನ್‌ ಅವರ ಆರಂಭಿಕ ಜೋಡಿ ಮೇಲೆ ಭರವಸೆ ಸಾಲದು. ಇವರಲ್ಲಿ ತಾಂಜಿದ್‌ ಲಂಕಾ ವಿರುದ್ಧ ಪದಾರ್ಪಣೈಗದು ಸೊನ್ನೆ ಸುತ್ತಿ ಬಂದಿದ್ದಾರೆ. ಅನುಭವಿಗಳಾದ ಮುಶ್ಫಿಕರ್‌ ರಹೀಂ, ಶಕಿಬ್‌, ಭರವಸೆಯ ಬ್ಯಾಟರ್‌ ತೌಹಿದ್‌ ಹೃದಯ್‌ ಕ್ರೀಸ್‌ ಆಕ್ರಮಿಸಿಕೊಳ್ಳಬೇಕಿದೆ.

ಬಾಂಗ್ಲಾ ಬೌಲಿಂಗ್‌ ವಿಭಾಗ ಘಾತಕವಾಗಿಯೇ ಇದೆ. ಟಸ್ಕಿನ್‌ ಅಹ್ಮದ್‌, ಶೊರೀಫುಲ್‌ ಇಸ್ಲಾಮ್‌, ಶಕಿಬ್‌, ಮೆಹೆದಿ ಹಸನ್‌ ಇಲ್ಲಿನ ಪ್ರಮುಖರು. ಲಂಕೆಗೆ ಸಣ್ಣ ಟಾರ್ಗೆಟ್‌ ಲಭಿಸಿದ ಕಾರಣ ಇವರಿಗೆ ಏನೂ ಮಾಡಲಾಗಲಿಲ್ಲ.

Advertisement

ಅಪಾಯಕಾರಿ ಅಫ್ಘಾನ್‌
ಅಫ್ಘಾನಿಸ್ಥಾನ ಅನಿಶ್ಚಿತ ಆಟಕ್ಕೆ ಹೆಸರುವಾಸಿಯಾದ ಪಡೆ. ಅಪಾಯಕಾರಿಯಾಗಿ ಎದುರಾಳಿ ಮೇಲೆರಗಬಹುದು, ಹೋರಾಟ ನೀಡದೆ ಶರಣಾಗಲೂಬಹುದು. ಅದು ಪಾಕಿಸ್ಥಾನ ವಿರುದ್ಧ ಕ್ಲೀನ್‌ಸಿÌàಪ್‌ ಸಂಕಟ ಅನುಭವಿಸಿ ಏಷ್ಯಾ ಕಪ್‌ ಆಡಲು ಬಂದಿದೆ. ಆದರೆ ಜೂನ್‌-ಜುಲೈಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿಯನ್ನು 2-1ರಿಂದ ಗೆದ್ದ ಹೆಗ್ಗಳಿಕೆಯನ್ನು ಹೊಂದಿದೆ.

ಅಫ್ಘಾನ್‌ ಆರಂಭಕಾರ ರೆಹಮಾನುಲ್ಲ ಗುರ್ಬಜ್‌ ಪ್ರಚಂಡ ಫಾರ್ಮ್ನಲ್ಲಿ ದ್ದಾರೆ. ಕಳೆದ ಏಕದಿನ ಸರಣಿಯಲ್ಲಿ ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ವಿರುದ್ಧ ಸೆಂಚುರಿ ಬಾರಿಸಿದ್ದಾರೆ. ಹಶ್ಮತುಲ್ಲ ಶಾಹಿದಿ, ಇಬ್ರಾಹಿಂ ಜದ್ರಾನ್‌, ನಜೀಬುಲ್ಲ ಜದ್ರಾನ್‌, ಮೊಹಮ್ಮದ್‌ ನಬಿ ಅವರೆಲ್ಲ ಬ್ಯಾಟಿಂಗ್‌ ವಿಭಾಗದ ಆಧಾರಸ್ತಂಭವಾಗಿದ್ದಾರೆ.

ಇತ್ತೀಚೆಗಷ್ಟೇ ನಾಯಕತ್ವ ಕಳೆದುಕೊಂಡ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌, ಆಫ್ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಬೌಲಿಂಗ್‌ ಶಕ್ತಿಯಾಗಿದ್ದಾರೆ. ಮೇಲ್ನೋಟಕ್ಕೆ ಬಾಂಗ್ಲಾಕ್ಕಿಂತ ಅಫ್ಘಾನಿಸ್ಥಾನವೇ ಬಲಿಷ್ಠ ತಂಡವಾಗಿ ಗೋಚರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next