Advertisement

ಲಂಕಾ ಸಿಂಹವನ್ನು ಮಣಿಸಲೇಬೇಕು ಭಾರತ; ರೋಹಿತ್‌ ಪಡೆಗೆ ಮಸ್ಟ್‌ ವಿನ್‌ ಮ್ಯಾಚ್‌

11:18 PM Sep 05, 2022 | Team Udayavani |

ದುಬಾೖ: ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ “ಸೂಪರ್‌ ಫೋರ್‌’ ಹಂತದಲ್ಲಿ ಟೀಮ್‌ ಇಂಡಿಯಾ “ಮಾಡು-ಮಡಿ’ ಸ್ಥಿತಿಗೆ ತಲುಪಿದೆ. ಮಂಗಳವಾರ ಶ್ರೀಲಂಕಾ ಎದುರಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಆಗಷ್ಟೇ ರೋಹಿತ್‌ ಪಡೆಯ ಫೈನಲ್‌ ಹಾದಿ ಸುಗಮಗೊಳ್ಳಲಿದೆ ಎಂಬುದು ಸದ್ಯದ ಲೆಕ್ಕಾಚಾರ.

Advertisement

ಸೂಪರ್‌-4 “ರೌಂಡ್‌ ರಾಬಿನ್‌ ಲೀಗ್‌’ ಮಾದರಿಯಾಗಿದ್ದು, ಒಂದು ತಂಡಕ್ಕೆ ಮೂರು ಪಂದ್ಯಗಳು ಲಭಿಸಲಿವೆ. ಅತ್ಯಧಿಕ ಅಂಕ ಸಂಪಾದಿಸಿದ ಎರಡು ತಂಡಗಳು ನೇರವಾಗಿ ಫೈನಲ್‌ ಪ್ರವೇಶಿಸಲಿವೆ. ಎರಡು ತಂಡಗಳ ಅಂಕಗಳು ಸಮನಾದರೆ ರನ್‌ರೇಟ್‌ ಪಾತ್ರ ನಿರ್ಣಾಯಕವಾಗಲಿದೆ. ಹೀಗಾಗಿ ಕೇವಲ ಗೆದ್ದರಷ್ಟೇ ಸಾಲದು, ರನ್‌ಧಾರಣೆಯನ್ನೂ ಉತ್ತಮ ಪಡಿಸಿಕೊಳ್ಳಬೇಕಿದೆ.

ಈವರೆಗಿನ ಲೆಕ್ಕಾಚಾರದಂತೆ, ಒಂದೊಂದು ಸೂಪರ್‌ ಫೋರ್‌ ಪಂದ್ಯ ಗೆದ್ದ ಶ್ರೀಲಂಕಾ ಮತ್ತು ಪಾಕಿಸ್ಥಾನ ಮೊದಲೆರಡು ಸ್ಥಾನದಲ್ಲಿವೆ. ಭಾರತವನ್ನೂ ಮಣಿಸಿದರೆ ಲಂಕೆಯ ಫೈನಲ್‌ ಸ್ಥಾನ ಬಹುತೇಕ ಖಚಿತಗೊಳ್ಳಲಿದೆ. ಆಗ ಭಾರತದ ಸ್ಥಿತಿ ಬಿಗಡಾಯಿಸಲಿದೆ. ಇದಕ್ಕೆ ನಮ್ಮವರು ಅವಕಾಶ ಮಾಡಿಕೊಡಬಾರದು. ಫ‌ುಲ್‌ ಜೋಶ್‌ನೊಂದಿಗೆ ಸಿಂಹಳೀಯರ ಮೇಲೆರಗಿ ಗೆಲುವನ್ನು ಕಸಿದುಕೊಳ್ಳಬೇಕಿದೆ.

ಕೈಲಿದ್ದ ಪಂದ್ಯ ಜಾರಿತು
ಭಾರತದ ಇಂಥದೊಂದು ಒತ್ತಡದ ಸ್ಥಿತಿಗೆ ಕಾರಣ, ಪಾಕಿಸ್ಥಾನ ವಿರುದ್ಧ ಅನುಭವಿಸಿದ ಸೋಲು. 18ನೇ ಓವರ್‌ ತನಕ ನಮ್ಮದೇ ಆಗಿದ್ದ ಪಂದ್ಯವನ್ನು ಭಾರತ ಅತ್ಯಂತ ಶೋಚನೀಯ ರೀತಿಯಲ್ಲಿ ಕೈಚೆಲ್ಲಿತ್ತು. 2 ಓವರ್‌, 26 ರನ್‌-ಇದು ಕೊನೆಯ ಹಂತದ ಲೆಕ್ಕಾಚಾರ. ತಂಡದ ಅತ್ಯಂತ ಅನುಭವಿ ಬೌಲರ್‌ ಭುವನೇಶ್ವರ್‌ ಕುಮಾರ್‌ 19ನೇ ಓವರ್‌ ಎಸೆಯಲು ಬಂದಾಗ ಅವರ ಮೇಲೆ ಭಾರೀ ನಂಬಿಕೆ ಇಡಲಾಗಿತ್ತು. ಆದರೆ ಇದು ಫ‌ಲಿಸಲಿಲ್ಲ. 2 ವೈಡ್‌, ಒಂದು ಸಿಕ್ಸರ್‌, 2 ಫೋರ್‌… ಹೀಗೆ 19ನೇ ಓವರ್‌ನಲ್ಲಿ 19 ರನ್‌ ಸೋರಿಹೋಯಿತು. ಆಸಿಫ್ ಅಲಿ-ಖುಷಿªಲ್‌ ಶಾ ಸೇರಿಕೊಂಡು ಮುನ್ನುಗ್ಗಿ ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದರು.

ಬೌಲಿಂಗ್‌ ದೌರ್ಬಲ್ಯ…
ಇದನ್ನು ಕಂಡಾಗ ಭಾರತದ ಬೌಲಿಂಗ್‌ ವಿಭಾಗದ ಮೇಲೆ ನಂಬಿಕೆ ಸಾಲುತ್ತಿಲ್ಲ. ನಮ್ಮವರ ವೇಗದ ಬೌಲಿಂಗ್‌ ಕೂಟದಲ್ಲೇ ಅತ್ಯಂತ ದುರ್ಬಲ ಎಂಬ ಹಣೆಪಟ್ಟಿ ಹೊತ್ತಿರುವಾಗ ಭುವನೇಶ್ವರ್‌ ಕುಮಾರ್‌ ಸಂಪೂರ್ಣ ನಿಯಂತ್ರಣ ಕಳೆದುಕೊಂಡದ್ದು ಚಿಂತೆಯನ್ನು ಬಿಗಡಾಯಿಸುವಂತೆ ಮಾಡಿದೆ. ಪಾಕ್‌ ಎದುರಿನ ಮೊದಲ ಪಂದ್ಯದಲ್ಲಿ ಆಲ್‌ರೌಂಡ್‌ ಶೋ ಮೂಲಕ ಮಿಂಚಿದ್ದ ಹಾರ್ದಿಕ್‌ ಪಾಂಡ್ಯ, ಸ್ಪಿನ್ನರ್‌ ಯಜುವೇಂದ್ರ ಚಹಲ್‌ ರವಿವಾರ ರಾತ್ರಿ ಮ್ಯಾಜಿಕ್‌ ಮಾಡುವಲ್ಲಿ ಸಂಪೂರ್ಣ ವಿಫ‌ಲರಾಗಿದ್ದರು. ಚಹಲ್‌ ಸ್ಥಾನಕ್ಕೆ ಅಕ್ಷರ್‌ ಪಟೇಲ್‌ ಬರುವ ಸಾಧ್ಯತೆ ಇದೆ.

Advertisement

ಪಾಕ್‌ ಎದುರಿನ ಪಂದ್ಯದ ಧನಾತ್ಮಕ ಅಂಶವೆಂದರೆ ಅಗ್ರ ಕ್ರಮಾಂಕದ ಮೂವರೂ ಬ್ಯಾಟರ್ ಕ್ಲಿಕ್‌ ಆದದ್ದು. ರೋಹಿತ್‌, ರಾಹುಲ್‌ ಮತ್ತು ಕೊಹ್ಲಿ ಬಹಳ ಸಮಯದ ಬಳಿಕ ಒಟ್ಟಿಗೇ ಮಿಂಚಿದರು. ಆದರೆ ರಿಷಭ್‌ ಪಂತ್‌ “ಕೇರ್‌ಲೆಸ್‌’ ಹೊಡೆತಕ್ಕೆ ಬ್ರೇಕ್‌ ಹಾಕಬೇಕಾದ ಅಗತ್ಯವಿದೆ. ಸೂರ್ಯಕುಮಾರ್‌, ಹೂಡಾ ಸಿಡಿದು ನಿಂತರೆ ಬೃಹತ್‌ ಮೊತ್ತಕ್ಕೇನೂ ಅಡ್ಡಿ ಇಲ್ಲ

ಶ್ರೀಲಂಕಾ ಅಸ್ಥಿರ ತಂಡ
ಅಫ್ಘಾನಿಸ್ಥಾನ ವಿರುದ್ಧ ಸೇಡು ತೀರಿಸಿಕೊಂಡ ಉತ್ಸಾದಲ್ಲಿರುವ ಶ್ರೀಲಂಕಾ ಭಾರೀ ಅಪಾ ಯಕಾರಿಯೇನಲ್ಲ. ಕ್ರಿಸ್‌ ಸಿಲ್ವರ್‌ವುಡ್‌ ಮಾರ್ಗ ದರ್ಶನದ ಈ ತಂಡದ ಸಮಸ್ಯೆಯೆಂದರೆ, ಸ್ಥಿರ ನಿರ್ವಹಣೆಯ ಕೊರತೆ. ಒಂದು ಪಂದ್ಯದಲ್ಲಿ ಸಿಡಿದು ನಿಂತರೆ, ಇನ್ನೊಂದರಲ್ಲಿ ಕುಸಿದು ಬೀಳುತ್ತದೆ.

ಕೂಟದ ಉದ್ಘಾಟನ ಪಂದ್ಯದಲ್ಲಿ ಅಫ್ಘಾನ್‌ ವಿರುದ್ಧ ಲಂಕಾ ಗಳಿಸಿದ್ದು 105 ರನ್‌ ಮಾತ್ರ. ಬಾಂಗ್ಲಾ ವಿರುದ್ಧ 180 ಪ್ಲಸ್‌ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಬಳಿಕ ಅಫ್ಘಾನಿಸ್ಥಾನ ವಿರುದ್ಧ 6ಕ್ಕೆ 179 ರನ್‌ ಬಾರಿಸಿ ಗೆದ್ದು ಬಂದಿತು. ನಾಯಕ ಶಣಕ, ಮೆಂಡಿಸ್‌, ಗುಣತಿಲಕ, ರಾಜಪಕ್ಸ ಅವರನ್ನೆಲ್ಲ ಟಿ20 ಸ್ಪೆಷಲಿಸ್ಟ್‌ ಬ್ಯಾಟರ್ ಎನ್ನಲಡ್ಡಿಯಿಲ್ಲ. ಬೌಲಿಂಗ್‌ ವಿಭಾಗದಲ್ಲಿ ವನಿಂದು ಹಸರಂಗ ಟ್ರಂಪ್‌ಕಾರ್ಡ್‌ ಆಗಬಲ್ಲರು.ಟಾಸ್‌ ಗೆಲುವು ಮತ್ತೆ ನಿರ್ಣಾಯಕ ಆಗಲಿದೆ. ಚೇಸಿಂಗ್‌ ತಂಡಕ್ಕೆ ಇಲ್ಲಿ ಗೆಲುವಿನ ಅವಕಾಶ ಹೆಚ್ಚು.

ಭಾರತ-ಪಾಕ್‌ ಅಭಿಮಾನಿಗಳು ಜತೆ ಜತೆಯಲಿ…
ದುಬಾೖ: ಇದು ರವಿವಾರದ ಭಾರತ-ಪಾಕಿಸ್ಥಾನ ನಡುವಿನ ಸೂಪರ್‌ ಫೋರ್‌ ಪಂದ್ಯದ ವೇಳೆ ಕಂಡುಬಂದ ಅಪರೂಪದ ದೃಶ್ಯ. ಇಲ್ಲಿ ಇತ್ತಂಡಗಳ ಅಭಿಮಾನಿಗಳು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಇವರು ರೋಹಿತ್‌ ಶರ್ಮ, ಬಾಬರ್‌ ಆಜಂ ಮತ್ತು ವಿರಾಟ್‌ ಕೊಹ್ಲಿ ಫ್ಯಾನ್ಸ್‌. ರೋಹಿತ್‌ ಮತ್ತು ಕೊಹ್ಲಿ ಅಭಿಮಾನಿಗಳು ಪಾಕಿಸ್ಥಾನದವರಾಗಿದ್ದು, ಇವರ ಹಸಿರು ಜೆರ್ಸಿಯಲ್ಲಿ ಭಾರತೀಯ ಕ್ರಿಕೆಟಿಗರ ಹೆಸರಿದೆ. ಹಾಗೆಯೇ ಬಾಬರ್‌ ಅಭಿಮಾನಿ ಭಾರತೀಯನಾಗಿದ್ದು, ನೀಲಿ ಜೆರ್ಸಿ ಧರಿಸಿದ್ದಾರೆ. ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖೀಯನ್ನು ಕೇವಲ ಕ್ರಿಕೆಟ್‌ ಪಂದ್ಯವಾಗಿ ನೋಡಿ ಎಂಬ ಸಂದೇಶ ಎರಡೂ ಕಡೆಗಳಿಂದ ವಿನಿಮಯವಾಗುತ್ತಿದೆ.

ಅರ್ಷದೀಪ್‌ ಬಗ್ಗೆ ಎಡವಟ್ಟು; ವಿಕಿಪೀಡಿಯಕ್ಕೆ ಕೇಂದ್ರ ಸಮನ್ಸ್‌
ದುಬಾೖ: ಭಾರತ-ಪಾಕಿಸ್ಥಾನ ನಡುವಿನ ಏಷ್ಯಾ ಕಪ್‌ ಟಿ20 ಪಂದ್ಯ ರವಿವಾರ ರೋಚಕ ಅಂತ್ಯ ಕಂಡಿರುವುದು ಹಳೆಯ ಸುದ್ದಿ. ಬ್ರೇಕಿಂಗ್‌ ನ್ಯೂಸ್‌ ಏನೆಂದರೆ, ವೇಗಿ ಅರ್ಷದೀಪ್‌ ಸಿಂಗ್‌ ಬಗ್ಗೆ “ವಿಕಿಪೀಡಿಯ’ದಲ್ಲಿ ಪ್ರಕಟವಾದ ಎಡವಟ್ಟು ಮಾಹಿತಿ. ಇದು ಆಂತರಿಕ ಕಲಹಕ್ಕೆ ಕಾರಣವಾಗಬಹುದು ಎನ್ನುವ ಕಾರಣಕ್ಕೆ ಕೇಂದ್ರ ಮಾಹಿತಿ ಸಚಿವಾಲಯವು ವಿಕಿಪೀಡಿಯಕ್ಕೆ ಸಮನ್ಸ್‌ ನೀಡಿದೆ.

ಆಗಿದ್ದೇನು?
ಕ್ಯಾಚ್‌ ಬಿಟ್ಟ ಕಾರಣಕ್ಕೆ ಮೊದಲೇ ಟೀಕೆಗೊಳಗಾಗಿದ್ದ ಅರ್ಷದೀಪ್‌ ಅವರನ್ನು, ಪಂಜಾಬಿನ ಪ್ರತ್ಯೇಕತಾವಾದಿ ಉಗ್ರ ಸಂಘಟನೆ ಖಲಿಸ್ಥಾನದೊಂದಿಗೆ ವಿಕಿಪೀಡಿಯ ಮಾಹಿತಿಯಲ್ಲಿ ಸೇರಿಸಲಾಗಿತ್ತು. ಕಿಡಿಗೇಡಿಯೊಬ್ಬರು, ಅರ್ಷದೀಪ್‌ ಪುಟದಲ್ಲಿ ಎಲ್ಲೆಲ್ಲಿ ಭಾರತದ ಹೆಸರು ಇತ್ತೋ ಅಲ್ಲೆಲ್ಲ “ಖಲಿಸ್ಥಾನ’ ಎಂದು ಸೇರಿಸಿದ್ದಾರೆ.
ವಿಕಿಪೀಡಿಯದ ಮಾಹಿತಿಯನ್ನು ಯಾರು ಬೇಕಾದರೂ ಬದಲಾಯಿಸಬಹುದಾದ್ದರಿಂದ ಹೀಗಾಗಿದೆ. ಕೇವಲ 15 ನಿಮಿಷಗಳೊಳಗೆ ವಿಕಿಪೀಡಿಯ ಈ ಸಮಸ್ಯೆಯನ್ನು ಬಗೆಹರಿಸಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next