ಮುಂಬಯಿ: ಈ ಬಾರಿಯ ಏಷ್ಯಾ ಕಪ್ ಕ್ರಿಕೆಟ್ ಕೂಟವು ಪಾಕಿಸ್ಥಾನ ದಿಂದ ಹೊರಹೋಗುವುದು ಬಹುತೇಕ ಖಚಿತವಾಗಿದೆ. ಇತ್ತೀಚೆಗೆ ಬಹ್ರೈನ್‌ನಲ್ಲಿ ನಡೆದ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಸಾಧ್ಯವೇ ಇಲ್ಲ ಎಂದ ಹಿನ್ನೆಲೆಯಲ್ಲಿ ಪರಿಸ್ಥಿತಿ ಹೀಗೆ ಬದಲಾವಣೆಗೊಂಡಿದೆ ಎಂದು ಮೂಲಗಳು ಹೇಳಿವೆ.
ಭಾರತೀಯ ಸರಕಾರ ಪಾಕಿಸ್ಥಾನಕ್ಕೆ ತೆರಳಲು ಭಾರತ ಕ್ರಿಕೆಟ್ ತಂಡಕ್ಕೆ ಅನು ಮತಿ ನೀಡುವುದಿಲ್ಲ ಎಂದು ಬಿಸಿಸಿಐ ಪರಿಸ್ಥಿತಿಯನ್ನು ವಿವರಿಸಿದೆ ಮಾತ್ರವಲ್ಲದೇ ಇತರ ರಾಷ್ಟ್ರಗಳಿಗೆ ಮನವರಿಕೆ ಮಾಡಿ ಕೊಟ್ಟಿದೆ. ಇದು ಉಳಿದ ರಾಷ್ಟ್ರಗಳಿಗೂ ಅರ್ಥವಾಗಿರುವುದರಿಂದ ಕೂಟ ನಡೆಸುವ ಜಾಗ ಬದಲಾಗುವ ಸಾಧ್ಯತೆ ಯಿದೆ. ಆದರೆ ಏಷ್ಯಾ ಕ್ರಿಕೆಟ್ ಸಮಿತಿ ಸಭೆಯಲ್ಲಿ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಇನ್ನೊಂದು ತಿಂಗಳ ಅನಂತರ ಮತ್ತೆ ಸಭೆ ಸೇರಿ ಆತಿಥೇಯ ರಾಷ್ಟ್ರ ಮತ್ತು ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ.
ಭಾರತ ಕ್ರಿಕೆಟ್ ತಂಡ ಪಾಕಿಸ್ಥಾನಕ್ಕೆ ತೆರಳುವುದಿಲ್ಲ. ಆದರೆ ಪಾಕ್ ಆತಿಥೇ ಯತ್ವದಲ್ಲಿ ಬೇರೆ ಕಡೆಯಲ್ಲಿ ಏಷ್ಯಾ ಕಪ್ ನಡೆದರೆ, ಅಲ್ಲಿ ಭಾಗವಹಿಸಲು ಸಿದ್ಧವಿದೆ. ಹೀಗಾಗಿ ದುಬಾೖ, ಶಾರ್ಜಾ, ಅಬುಧಾಬಿಯಲ್ಲಿ ಪಂದ್ಯಗಳು ನಡೆದರೆ ತಾನು ಆಡುತ್ತೇನೆ ಎಂದು ಬಿಸಿಸಿಐ ಹೇಳಿದೆ.
ಈ ಬಗ್ಗೆ ಪಿಸಿಬಿ ಅಧ್ಯಕ್ಷ ನಜಾಮ್ ಸೇಥಿಯವರೊಂದಿಗೂ, ಎಸಿಸಿ ಅಧ್ಯಕ್ಷರೂ ಆಗಿರುವ ಜಯ್ ಶಾ ಮಾತುಕತೆ ನಡೆಸಿದ್ದಾರೆ.
ಒಂದು ವೇಳೆ ಮುಂಚೆಯೇ ನಿಗದಿ ಯಾ ದಂತೆ, ಕೂಟ ಪಾಕಿಸ್ಥಾನದಲ್ಲೇ ನಡೆಯಬೇಕೆಂದು ಪಿಸಿಬಿ ಹಠ ಹಿಡಿದರೆ ಆಗ ಭಾರತವಿಲ್ಲದೇ ಏಷ್ಯಾ ಕಪ್ ನಡೆಯಲಿದೆ.