Advertisement

Asia Cup; ಭಾರತಕ್ಕೆ ಇಂದು ಬಾಂಗ್ಲಾ ಸವಾಲು

11:07 PM Sep 14, 2023 | Team Udayavani |

ಕೊಲಂಬೊ: ಸತತ ಎರಡು ಗೆಲುವಿನೊಂದಿಗೆ ಈಗಾಗಲೇ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಹಂತಕ್ಕೇರಿರುವ ಭಾರತ ತಂಡವು ಶುಕ್ರವಾರ ನಡೆಯುವ ಸೂಪರ್‌ ಫೋರ್‌ ಹಂತದ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಬಾಂಗ್ಲಾದೇಶ ಈ ಪಂದ್ಯವನ್ನು ಗೆದ್ದು ಸಮಾಧಾನಪಟ್ಟುಕೊಳ್ಳಲು ಬಯಸಿದೆ.

Advertisement

ರವಿವಾರದ ಪ್ರಶಸ್ತಿ ಸಮರಕ್ಕೆ ಸಿದ್ಧತೆ ನಡೆಸಿಕೊಳ್ಳಲು ಇದು ಭಾರತಕ್ಕೆ ಲಭಿಸಿದ ಅಭ್ಯಾಸ ಪಂದ್ಯವಾಗಿದೆ. ಈ ಪಂದ್ಯದಲ್ಲಿ ರೋಹಿತ್‌ ಪಡೆಯು ತನ್ನ ಮೊದಲ ಆಯ್ಕೆಯ ತಂಡಕ್ಕೆ ಸಾಧ್ಯವಾದಷ್ಟು ಅಭ್ಯಾಸ ನಡೆಸಲು ಅಥವಾ ಮುಂಬರುವ ವಿಶ್ವಕಪ್‌ ಮುಂಚಿತವಾಗಿ ತನ್ನ ಮೀಸಲು ಆಟಗಾರರಿಗೆ ಇನ್ನೊಂದು ಅವಕಾಶ ನೀಡಬೇಕೆ ಎಂಬುದರ ಬಗ್ಗೆ ಅಲೋಚಿಸುತ್ತಿದೆ. ಬೌಲರ್‌ಗಳಿಗೆ ಹೆಚ್ಚಿನ ಅಭ್ಯಾಸ ಕಲ್ಪಿಸಲು ತಂಡ ವ್ಯವಸ್ಥಾಪಕರು ಯೋಚಿಸುತ್ತಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ಏಷ್ಯಾ ಕಪ್‌ನಲ್ಲಿ ಕೇವಲ 12 ಓವರ್‌ ಎಸೆದಿದ್ದಾರೆ. ಪಾಕಿಸ್ಥಾನ ವಿರುದ್ಧ ಐದು ಮತ್ತು ಶ್ರೀಲಂಕಾ ವಿರುದ್ಧ ಏಳು ಓವರ್‌ ಎಸೆದಿದ್ದರು. ಆದರೆ ನೇಪಾಳ ವಿರುದ್ಧ ಅವರು ಆಡಿರಲಿಲ್ಲ. ಈ ಕಾರಣಕ್ಕಾಗಿ ಬುಮ್ರಾ ಅವರನ್ನು ಫೈನಲ್‌ ಮೊದಲು ಬಾಂಗ್ಲಾ ವಿರುದ್ಧ ಆಡಿಸಲು ಚಿಂತನೆ ಮಾಡಲಾಗುತ್ತಿದೆ.

ರಾಹುಲ್‌ಗೆ ಅವಕಾಶ
ಕೆಎಲ್‌ ರಾಹುಲ್‌ ಪರಿಪೂರ್ಣ ಫಿಟ್‌ನೆಸ್‌ಗೆ ಮರಳಿರುವುದು ತಂಡ ವ್ಯವಸ್ಥಾಪಕರಿಗೆ ಸಮಾಧಾನ ತಂಡಿದೆ. ಚುರುಕಿನ ಬ್ಯಾಟಿಂಗ್‌ ಮತ್ತು ವಿಕೆಟ್‌ ಹಿಂದುಗಡೆ ಉತ್ತಮ ಕೀಪಿಂಗ್‌ ನಡೆಸಿದ ರಾಹುಲ್‌ ತಂಡದ ಪ್ರಮುಖ ವಿಕೆಟ್‌ಕೀಪರ್‌ ತಥಾ ಬ್ಯಾಟ್ಸ್‌ಮನ್‌ ಎಂದೆನಿಸಿಕೊಂಡಿದ್ದಾರೆ. ಹೀಗಾಗಿ ಅವರು ಬಾಂಗ್ಲಾ ವಿರುದ್ಧ ತನ್ನ ಕರ್ತವ್ಯವನ್ನು ಮುಂದುವರಿಸುವುದು ಖಚಿತವಾಗಿದೆ. ಬೆನ್ನು ನೋವಿನಿಂದಾಗಿ ಪಾಕಿಸ್ಥಾನ ಮತ್ತು ಶ್ರೀಲಂಕಾ ವಿರುದ್ಧದ ಸೂಪರ್‌ ಫೋರ್‌ ಪಂದ್ಯದಿಂದ ಹೊರಗಿದ್ದ ಶ್ರೇಯಸ್‌ ಅಯ್ಯರ್‌ ಅವರ ಫಿಟ್‌ನೆಸ್‌ ಬಗ್ಗೆ ಗಮನ ಹರಿಸಬೇಕಾಗಿದೆ.

ಮುಶ್ಫಿಕರ್‌ ರಹೀಂ ಇಲ್ಲ
ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿರುವ ಮುಶ್ಫಿಕರ್‌ ರಹೀಂ ಅವರು ಭಾರತ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ. ಶ್ರೀಲಂಕಾ ವಿರುದ್ಧದ ಸೂಪರ್‌ ಫೋರ್‌ ಪಂದ್ಯದ ಬಳಿಕ ಅವರು ತವರಿಗೆ ಮರಳಿದ್ದಾರೆ. ರಹೀಂ ಅವರ ಅನುಪಸ್ಥಿತಿಯಲ್ಲಿ ಲಿಟನ್‌ ದಾಸ್‌ ವಿಕೆಟ್‌ ಹಿಂದುಗಡೆ ಕರ್ತವ್ಯ ನಿಭಾಯಿಸುವ ನಿರೀಕ್ಷೆಯಿದೆ. ಇದೇ ವೇಳೆ ನಾಯಕ ಶಕಿಬ್‌ ಅಲ್‌ ಹಸನ್‌ ತಂಡವನ್ನು ಸೇರಿಕೊಂಡಿದ್ದು ಭಾರತ ವಿರುದ್ಧ ಆಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next